
ತೆಲಂಗಾಣ: ಕೊಟ್ಟ ಸಾಲ ಮರಳಿ ಬರುವುದೇ ಅಪರೂಪವಾಗಿರುವ ಈ ದಿನಗಳಲ್ಲಿ, ಕೇರಳದ ವ್ಯಕ್ತಿಯೊಬ್ಬರು ಬರೋಬ್ಬರಿ 25 ವರ್ಷಗಳ ಹಿಂದೆ ತಾನು ಪಡೆದಿದ್ದ ಸಾಲದ ಹಣವನ್ನು ಮರುಪಾವತಿಸಲು ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ಬಂದು ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ.
ಕೇರಳದ ಪಾಲಕ್ಕಾಡ್ ಮೂಲದ ಮೊಹಮ್ಮದ್ ಇಸ್ಮಾಯಿಲ್ ಮತ್ತು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಧರ್ಮಪುರಿ ನಿವಾಸಿ ಎಡ್ಲಾ ಲಚ್ಚಣ್ಣ ಸುಮಾರು ಎರಡು ದಶಕಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಇಸ್ಮಾಯಿಲ್ ಅವರು ಲಚ್ಚಣ್ಣ ಅವರಿಂದ 25 ಸಾವಿರ ರೂಪಾಯಿ ಸಾಲ ಪಡೆದಿದ್ದರು. ತದನಂತರ ಇಬ್ಬರ ನಡುವೆ ಸಂಪರ್ಕ ಕಡಿತಗೊಂಡು, ಫೋನ್ ನಂಬರ್ ಹಾಗೂ ವಿಳಾಸ ಕಳೆದುಹೋಗಿತ್ತು.
ಆದರೆ ಸಾಲದ ನೆನಪು ಇಸ್ಮಾಯಿಲ್ ಅವರ ಮನಸ್ಸಿನಿಂದ ಮರೆತುಹೋಗಿರಲಿಲ್ಲ. ಗೆಳೆಯನ ಊರು ‘ಧರ್ಮಪುರಿ’ ಎಂಬ ಒಂದೇ ಒಂದು ಮಾಹಿತಿಯನ್ನು ಇಟ್ಟುಕೊಂಡು ಗೂಗಲ್ ಹಾಗೂ ಸ್ಥಳೀಯರ ಸಹಾಯದಿಂದ ಹುಡುಕುತ್ತಾ ಇಸ್ಮಾಯಿಲ್ ಕೊನೆಗೂ ಲಚ್ಚಣ್ಣನ ಮನೆ ತಲುಪಿದ್ದಾರೆ. ಲಚ್ಚಣ್ಣ ಪ್ರಸ್ತುತ ಉದ್ಯೋಗಕ್ಕಾಗಿ ಮತ್ತೆ ಗಲ್ಫ್ ದೇಶಕ್ಕೆ ತೆರಳಿದ್ದರಿಂದ, ಅವರ ಕುಟುಂಬಸ್ಥರ ಸಮ್ಮುಖದಲ್ಲೇ ಫೋನ್ ಮೂಲಕ ಇಬ್ಬರು ಸ್ನೇಹಿತರು ಭಾವುಕರಾಗಿ ಮಾತನಾಡಿದ್ದಾರೆ. ಬಳಿಕ ಇಸ್ಮಾಯಿಲ್ ತಾವು ಪಡೆದಿದ್ದ 25 ಸಾವಿರ ರೂ. ನಗದನ್ನು ಲಚ್ಚಣ್ಣನ ಕುಟುಂಬಕ್ಕೆ ಹಸ್ತಾಂತರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಇಸ್ಮಾಯಿಲ್ ಅವರ ಈ ಅಪರೂಪದ ಪ್ರಾಮಾಣಿಕ ನಡೆಗೆ ಸ್ಥಳೀಯರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.


