Friday, May 10, 2024
Homeತಾಜಾ ಸುದ್ದಿನಾಲ್ಕು ವರ್ಷಗಳಿಂದ ಕಾಣೆಯಾಗಿದ್ದವನು ಮತ್ತೆ ಮನೆ ಸೇರಿದ್ದು ಹೇಗೆ? ಇದೊಂದು ಮನ ಮಿಡಿಯುವ ಕಥೆ...

ನಾಲ್ಕು ವರ್ಷಗಳಿಂದ ಕಾಣೆಯಾಗಿದ್ದವನು ಮತ್ತೆ ಮನೆ ಸೇರಿದ್ದು ಹೇಗೆ? ಇದೊಂದು ಮನ ಮಿಡಿಯುವ ಕಥೆ…

spot_img
- Advertisement -
- Advertisement -

ಬಳ್ಳಾರಿ ; ಮಾನಸಿಕ ಅಸ್ವಸ್ಥ ಯುವಕ ಆಕಸ್ಮಿಕವಾಗಿ ಟ್ರಕ್ ಹತ್ತಿಕೊಂಡು ಪಶ್ಚಿಮ ಬಂಗಾಳದ ಮಾಲ್ಡಾ ತಲುಪಿ, ಆರೋಗ್ಯವಂತನಾಗಿ ಮನೆಗೆ ಮರಳಿದ ಕರುಣಾಜನಕ ಕಥೆ ಇದು.

ವೆಂಕಟೇಶ್. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಗಲಾಪುರ ಗ್ರಾಮದ ಯುವಕ. ವಯಸ್ಸು ಅಂದಾಜು ಸುಮಾರು 28 . ಮಾನಸಿಕ ಅಸ್ವಸ್ಥ. ನಾಲ್ಕು ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಈತ ಈಗ ಮರಳಿ ಮನೆ ಸೇರಿದ್ದಾನೆ. ಈತನದ್ದು ಮನ ಮಿಡಿಯುವ ಕಥೆ.

4 ವರ್ಷಗಳ ಹಿಂದೆ ಟ್ರಕ್ ಏರಿ ಪಶ್ಚಿಮ ಬಂಗಾಳದ ಮಾಲ್ಡಾ ತಲುಪಿದ್ದ ವೆಂಕಟೇಶ್, ಅಲ್ಲಿ ಬೀದಿ ಬೀದಿ ಹುಚ್ಚನ ರೀತಿಯಲ್ಲಿ ಅಲೆದಾಡುತ್ತಿದ್ದ. ಕೈಕಾಲುಗಳಿಗೆಲ್ಲ ರಕ್ತಸಿಕ್ತವಾದ ಗಾಯ, ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಾ, ತನ್ನವರಿಗಾಗಿ ಎಡಬಿಡದೇ ಹುಡುಕಾಡುತ್ತಿದ್ದ. ತನ್ನವರು ಯಾರೂ ಸಿಗದೇ ಇದ್ದಾಗ ಗಟ್ಟಿಯಾಗಿ ಗೋಗರೆಯುತ್ತಿದ್ದ. ತನ್ನವರಿಗಾಗಿ ಹಗಲಿರುಳೂ ಹಾದಿ ಬೀದಿ ಹುಡುಕಾಡುತ್ತಿದ್ದ.

ವೆಂಕಟೇಶನ ವರ್ತನೆ, ಬೀದಿ ಬೀದಿ ಅಲೆದಾಟವನ್ನು ಗಮನಿಸಿದ ಸ್ವಯಂ ಸೇವಾ ಸಂಸ್ಥೆ ಆತನಿಗೆ ಪ್ರೀತಿ ತೋರಿಸಿ, ಆರೈಕೆ ಮಾಡಿತ್ತು. ಸೂಕ್ತ ಚಿಕಿತ್ಸೆಯನ್ನೂ ನೀಡಿ ಆತನನ್ನು ಸಾಮಾನ್ಯ ಮನುಷ್ಯನನ್ನಾಗಿ ಮಾಡಿತು.

ವೆಂಕಟೇಶ ಎಲ್ಲರಂತೆ ಸಾಮಾನ್ಯನಾದ. ನಿಧಾನವಾಗಿ ತನ್ನ ಸ್ಥಳ, ಹುಟ್ಟೂರು, ತನ್ನವರು ಮತ್ತು ತನ್ನ ಮಾತೃಭಾಷೆಗಳನ್ನು ನೆನಪಿಸಿಕೊಂಡ. ಮಾತಿನ ಮಧ್ಯೆ ಮಧ್ಯೆ ತನ್ನವರನ್ನು ಜ್ಞಾಪಿಸಿಕೊಂಡು ತನ್ನ ಮೂಲ ಗ್ರಾಮದ ಒಂದೊಂದೇ ಸುಳಿವನ್ನು ನೀಡತೊಡಗಿದ್ದ.

ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗೆ ಈತನ ಮೂಲ ಸ್ಥಳದ ಮಾಹಿತಿ ಸಿಕ್ಕ ಕೂಡಲೇ ಅವರು ಮಾಲ್ಡಾದ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ, ಬಳ್ಳಾರಿ ಜಿಲ್ಲಾಧಿಕಾರಿಗಳನ್ನು ಸಂಪರ್ಕ ಮಾಡಿ, ಬಳ್ಳಾರಿ ಜಿಲ್ಲಾಡಳಿತಕ್ಕೆ ಮಾಹಿತಿ ತಲುಪಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅಂದೇ ವೆಂಟಕೇಶ ಪುನಃ `ಮರಳಿಗೂಡಿಗೆ’ ಸೇರಿಸಿ ಸಾರ್ಥಕ ಬದುಕು ನಡೆಸಲು ಸ್ಪಷ್ಟ ಅವಕಾಶ ಸಿಕ್ಕಿತ್ತು.

ವಿಷಯ ತಿಳಿದ ಬಳ್ಳಾರಿ ಜಿಲ್ಲಾಧಿಕಾರಿಗಳು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಾಲ್ಡಾದ ಎನ್‌ಜಿಒ ಅನ್ನು ಸಂಪರ್ಕ ಮಾಡಿ, ವೆಂಕಟೇಶನ ಪೂರ್ವಾಪರ ಸಂಗ್ರಹ ಮಾಡಿ ನಾಗಲಾಪುರಕ್ಕೆ ಮಾಹಿತಿ ನೀಡಿ, ಆತನ ಇಬ್ಬರು ಸಹೋದರರನ್ನು ಮಾಲ್ಡಾಕ್ಕೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಂಡರು.

ವೆಂಕಟೇಶನಿಗೆ ಮಾಲ್ಡಾ ಜಿಲ್ಲಾಡಳಿತ ಹಾಗೂ ಎನ್‌ಜಿಒ ಸಹಕಾರದೊಂದಿಗೆ ಮಾಲ್ಡಾದಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಕರೆತಂದು ಬಳ್ಳಾರಿ ಜಿಲ್ಲಾಡಳಿತದ ವೆಚ್ಚದಡಿ ಕಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಇಂದು ಕರೆತಂದರು.

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ವೆಂಕಟೇಶನ ಸಹೋದರಿಬ್ಬರು ವೆಂಕಟೇಶನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಹೋದರರಿಬ್ಬರ ಮಿಲನ ಮತ್ತು ಸಂತೋಷ, ಆನಂದಭಾಷ್ಪಕ್ಕೆ ವಿಮಾನನಿಲ್ದಾಣ ಸಾಕ್ಷಿಯಾಯಿತು. ಎಂದೆಂದಿಗೂ ಸಿಗಲಾರ ಎಂದುಕೊಂಡವ ಸಿಕ್ಕಖುಷಿ ಅವರದ್ದು.

ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿಶೇಷ ಕಾರಿನ ವ್ಯವಸ್ಥೆ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಹೋದರರ ಮೂಲಕ ವೆಂಕಟೇಶನನ್ನು ಸಂಡೂರು ತಾಲೂಕಿನ ನಾಗಲಾಪುರಕ್ಕೆ ಕರೆತಂದರು.

- Advertisement -
spot_img

Latest News

error: Content is protected !!