Monday, May 20, 2024
Homeಆರಾಧನಾಪಣೋಲಿಬೈಲಿನಲ್ಲಿ ಭಕ್ತರು ನೀಡುವ ದೈವದ ಕೋಲ ಸೇವೆಯಲ್ಲಿ ಬದಲಾವಣೆ

ಪಣೋಲಿಬೈಲಿನಲ್ಲಿ ಭಕ್ತರು ನೀಡುವ ದೈವದ ಕೋಲ ಸೇವೆಯಲ್ಲಿ ಬದಲಾವಣೆ

spot_img
- Advertisement -
- Advertisement -

ಬಂಟ್ವಾಳ: ಇಲ್ಲಿನ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಕ್ತರು ಕೋಲ ನಿಡುವ ಸೇವೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದ್ದು, ಇದಕ್ಕೆ ಮುಖ್ಯ ಕಾರಣ ಈವರೆಗೆ ಬುಕ್ಕಿಂಗ್ ಆಗಿರುವಂತಹ ಕೋಲ ಸೇವೆಗಳ ಸಂಖ್ಯೆ ಎಂದು ತಿಳಿದು ಬಂದಿದೆ.

23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ಕಿಂಗ್ ಈಗಾಗಲೇ ಪಣೋಲಿಬೈಲ್ ಕ್ಷೇತ್ರದಲ್ಲಿ ರುವುದರಿಂದ ಭಕ್ತರಿಗೆ ಶೀಘ್ರ ಸೇವೆ ಸಂದಾಯದ ಅವಕಾಶದ ಹಿನ್ನೆಲೆಯಲ್ಲಿ ಪ್ರತೀ ದಿನ ನಡೆಯುತ್ತಿದ್ದ ಕೋಲ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ.

ಕ್ಷೇತ್ರದ ನಿಯಮದಂತೆ ಈವರೆಗೂ ಪ್ರತೀದಿನ 4 ಮಂದಿಗೆ ಕೋಲ ಸೇವೆ ಮಾಡಲಾಗುತ್ತಿತ್ತು. ಆದರೆ ಈಗ 4 ಮಂದಿಯ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಮೇ 3ರಿಂದ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ಕ್ಷೇತ್ರದಲ್ಲಿ ನಡೆಯುವಂತಹ ಅಗೇಲು ಹಾಗೂ ಕೋಲ ಸೇವೆಗಳು ವಿಶೇಷವಾಗಿದ್ದು, ವಾರದ 3 ದಿನ ಅಗೇಲು ಹಾಗೂ ವಾರದ 5 ದಿನ ಕೋಲ ಸೇವೆ ಸಂದಾಯವಾಗುತ್ತದೆ. ಬೆಳಗ್ಗೆ ನಿಗದಿತ ಸಮಯದೊಳಗೆ ಬಂದವರಿಗೆ ಎಷ್ಟು ಬೇಕಾದರೂ ಅಗೇಲು ಸೇವೆ ನೀಡುವುದಕ್ಕೆ ಅವಕಾಶವಿದೆ. ಈ ಹಿಂದೆ ದಿನವೊಂದಕ್ಕೆ ಕೋಲ ಸೇವೆ ನೀಡುವುದಕ್ಕೆ ಬರೀ ನಾಲ್ವರಿಗೆ ಮಾತ್ರ ಅವಕಾಶವಿತ್ತು. ಆದರೆ ಪ್ರಸ್ತುತ ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಿದ್ದು, ಲೆಕ್ಕಾಚಾರ ಹಾಕಿದರೆ ಅದು ಪೂರ್ಣಗೊಳುವುದಕ್ಕೆ ಕನಿಷ್ಠ 35 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಇನ್ನು ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಕೋಲ ಸೇವೆಗೆ ಅವಕಾಶವಿದ್ದರೂ ತುಳುವಿನ ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜೀಪ ಮಾಗಣೆಯ ಜಾತ್ರೆ, ಉತ್ಸವ ಮೊದಲಾದ ಸಂದರ್ಭ ಕೋಲ ಸೇವೆ ನಡೆಯುವುದಿಲ್ಲ. ಹೀಗಾಗಿ ವರ್ಷಕ್ಕೆ 600-700 ಮಂದಿಗೆ ಮಾತ್ರ ಕೋಲ ಸೇವೆಗೆ ಅವಕಾಶ ಸಿಗುತ್ತಿತ್ತು. ಹೀಗಾಗಿ ಭಕ್ತರಿಗೆ ಶೀಘ್ರ ಸೇವೆಗೆ ಅವಕಾಶ ಸಿಗುವ ದೃಷ್ಟಿಯಿಂದ ದೈವದ ಬಳಿ ಹರಕೆ ಮಾಡಿ ಮಾಗಣೆಯ ದೈವದ ಅಪ್ಪಣೆ ಪಡೆದು ದಿನಕ್ಕೆ 4 ಕೋಲ ಸೇವೆ ನೀಡಿದರೂ ಪ್ರತೀ ಕೋಲದಲ್ಲಿ ಇಬ್ಬರಿಗೆ ಪ್ರಸಾದದಂತೆ 8 ಮಂದಿಗೆ ಪ್ರಸಾದ ನೀಡುವುದಕ್ಕೆ ನಿರ್ಧರಿಸಲಾಗಿದೆ.

ಪಣೋಲಿಬೈಲು ಕ್ಷೇತ್ರದ ಮೂಲಗಳಿಂದ ತಿಳಿದು ಬಂದಿರುವ ಹಾಗೆ ಮುಂದಿನ ದಿನಗಳಲ್ಲಿ ಕೋಲ ಸೇವೆ ನೀಡಲು ಬುಕ್ಕಿಂಗ್ ಮಾಡಿದವರಿಗೆ ಶೀಘ್ರವೇ ಅವಕಾಶ ಸಿಗಲಿದೆ.

ಪಣೋಲಿಬೈಲು ಕ್ಷೇತ್ರದ ಕೋಲದ ವಿಶೇಷ; ಪಣೋಲಿಬೈಲು ಕ್ಷೇತ್ರಕ್ಕೆ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಹರಕೆಯನ್ನು ಹೇಳುವುದು ವಾಡಿಕೆ. ಇನ್ನು ಈ ಹರಕೆ ಕೋಲವನ್ನು ಕ್ಷೇತ್ರದಲ್ಲಿ ಸಲ್ಲಿಸಲು ಕ್ಷೇತ್ರದಲ್ಲಿ ಬರೆಸಬೇಕಾಗಿದ್ದು, ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಕೋಲ ಸೇವೆ ನೀಡಲು ಅನುಮತಿ ಇರುತ್ತದೆ. ಪ್ರಸ್ತುತ ವಾರದಲ್ಲಿ ಐದು ದಿನ ಗಳ ಕಾಲ ಪ್ರತಿದಿನ ನಾಲ್ಕು ಕೋಲ ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತಿದ್ದು, ಕಾರ್ಣಿಕ ಕ್ಷೇತ್ರಕ್ಕೆ ಕೋಲ ಹರಕೆ ಸೇವೆ ನೀಡುವ ಸಂಖ್ಯೆಯೂ ಹೆಚ್ಚಾಗಿದೆ. ಈ ಕಾರಣದಿಂದಲೇ ಇದೀಗ ಪ್ರತಿದಿನ ನಾಲ್ಕು ಕೋಲ ಸೇವೆ ನಡೆದರೂ ಈವರೆಗೆ ಮಾಡಿದ ಬುಕ್ಕಿಂಗ್ ಪೂರ್ಣಗೊಳ್ಳಲು 35 ವರ್ಷ ಬೇಕಾಗುತ್ತದೆ. ಆ ಕಾರಣದಿಂದ ಇದೀಗ ಕೋಲ ಸೇವೆ ಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!