ವಾಷಿಂಗ್ಟನ್: ಏಷ್ಯಾಖಂಡದಲ್ಲಿಯೇ ಅತೀ ಹಿರಿಯ ಆನೆ ಎನ್ನಿಸಿಕೊಂಡಿದ್ದ 72 ವರ್ಷದ ಭಾರತೀಯ ಮೂಲದ ಅಂಬಿಕಾ ಎಂಬ ಹೆಣ್ಣಾನೆ ವಾಷಿಂಗ್ಟನ್ ನ ಸ್ಮಿತ್ ಸೋನಿಯಾನ್ಸ್ ನ್ಯಾಷನಲ್ ಝೂನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. 1948ರಲ್ಲಿ ಭಾರತದಲ್ಲಿ ಜನಿಸಿದ್ದ ಅಂಬಿಕಾ ಜಗತ್ತಿನ ಮೂರನೇ ಅತೀ ಹಿರಿಯ ಏಷಿಯನ್ ಆನೆಗಳಲ್ಲಿ ಒಂದಾಗಿದೆ. 8ವರ್ಷದ ಆನೆಯನ್ನು ಕೊಡಗಿನ ಕಾಡಿನಲ್ಲಿ ಸೆರೆಹಿಡಿಯಲಾಗಿತ್ತು. ಬಳಿಕ 1961ರವರೆಗೂ ಮರದ ದಿಮ್ಮಿಗಳನ್ನು ಸಾಗಿಸುವ ಕೆಲಸಕ್ಕೆ ಅಂಬಿಕಾಳನ್ನು ಬಳಸಿಕೊಳ್ಳಲಾಗಿತ್ತು.
ನಂತರ ಚಿಲ್ಡ್ರನ್ ಆಫ್ ಇಂಡಿಯಾ ಅಂಬಿಕಾ ಹೆಸರಿನ ಆನೆಯನ್ನು ಝೂಗೆ ಕೊಡುಗೆಯಾಗಿ ನೀಡಲಾಗಿತ್ತು. ಆರ್ ಐಪಿ ಅಂಬಿಕಾ ಲವಿಂಗ್ ಗಿಫ್ಟ್ ಫ್ರಾಂ ಇಂಡಿಯಾ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತಾರನ್ ಜಿತ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಏಷ್ಯಾದ ಹಿರಿಯ ಆನೆ ಅಂಬಿಕಾ ಸ್ಮಿತ್ ಸೋನಿಯಾನ್ಸ್ ನ್ಯಾಷನಲ್ ಝೂನಲ್ಲಿ ಸಾವನ್ನಪ್ಪಿರುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
72 ವರ್ಷದ ಅಂಬಿಕಾಗೆ ಎದ್ದು ನಿಲ್ಲಲು ಕೂಡಾ ಸಾಧ್ಯವಾಗುತ್ತಿರಲಿಲ್ಲವಾಗಿತ್ತು. ಜೀವಿತಾವಧಿಯಲ್ಲಿ ಒಳ್ಳೆಯ ದಿನಗಳನ್ನು ಕಂಡಿದ್ದ ಅಂಬಿಕಾಗೆ ವಯೋ ಸಹಜ ದೌರ್ಬಲ್ಯದಿಂದಾಗಿ ಅನಾರೋಗ್ಯ ಅನುಭವಿಸಿತ್ತು. ಆದರೆ ಅಂಬಿಕಾಳನ್ನು ನೋಡಿಕೊಳ್ಳುವ ಮಾವುತರು ಪ್ರೀತಿಯಿಂದ ಅದರ ಆರೈಕೆ ಮಾಡಿರುವುದಾಗಿ ವರದಿ ತಿಳಿಸಿದೆ.