ದೇಶದಾದ್ಯಂತ ಕೊರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿ ಪ್ರಯೋಗ ಮಾಡುತ್ತಿದ್ದಾರೆ. ಇದೀಗ ಜಿಲ್ಲೆಯ ಪ್ರಸಿದ್ದ ಮುಜರಾಯಿ ಇಲಾಖೆಯ ವ್ಯಾಪ್ತಿಯ ಧಾರ್ಮಿಕ ಕ್ಷೇತ್ರ ಮತ್ತು ರಾಜ್ಯದ ಶ್ರೀಮಂತ ದೇವಾಲಯದಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಮೇಲೂ ಪೊಲೀಸರು ಲಾಠಿ ಬೀಸಿದ್ದಾರೆ.
ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದ್ದಾರೆ ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯದ ಅರ್ಚಕ ಶ್ರೀನಿವಾಸ್ ಎಂಬವರು ದೂರಿದ್ದಾರೆ.
ಘಟನೆಯ ಹಿನ್ನೆಲೆ:
ಆದಿ ಸುಬ್ರಹ್ಮಣ್ಯದ ಅರ್ಚಕ ಶ್ರೀನಿವಾಸ್ ಇವರು ಶನಿವಾರ ಸಂಜೆಯ ನಿತ್ಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಶಂಕರ್ ಎನ್ನುವ ಕಾನ್ಸ್ ಟೇಬಲ್ ಪುರೋಹಿತರನ್ನು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಅರ್ಚಕರನ್ನು ಬೈಯ್ದದಲ್ಲದೆ , ಅರ್ಚಕರು ತಾನು ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿರುವುದಾಗಿ ದೇವಳದ ಕೀಯನ್ನು ತೋರಿಸಿದರೂ ಬಿಡದ ಈ ಪೋಲೀಸ್ ಸಿಬ್ಬಂದಿ ಅರ್ಚಕರ ಮೇಲೆ ತನ್ನ ಕೈಯಲ್ಲಿದ್ದ ಕೋಲಿನಿಂದ ಬಾಸುಂಡೆ ಏಳುವಂತೆ ಹಲ್ಲೆ ನಡೆಸಿರುತ್ತಾರೆ. ಜಿಲ್ಲೆಯ ಖ್ಯಾತ ದೇವಳದ ಮುಖ್ಯ ಅರ್ಚಕರು ತನ್ನ ದೈನಂದಿನ ಕಾರ್ಯ ನಡೆಸಲು ತೆರಳುವಾಗಲೂ ಈ ರೀತಿ ಅಮಾನುಷವಾಗಿ ಹಲ್ಲೆಗೈದ ಈ ಪೋಲೀಸ್ ಸಿಬ್ಬಂದಿ ಸ್ಥಳೀಯರೇ ಆಗಿದ್ದು ಪರಿಚಯವಿದ್ದರೂ ಈ ರೀತಿ ವರ್ತಿಸಿರುವ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಸಂಘಟನೆ ಉಗ್ರವಾಗಿ ಖಂಡಿಸಿದೆ. ಮತ್ತು ಅನ್ಯಾಯವಾಗಿ ಹಲ್ಲೆ ನಡೆಸಿದ ಪೋಲೀಸ್ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡಬೇಕಾಗಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಯವರನ್ನು ಮತ್ತು ಜಿಲ್ಲಾಧಿಕಾರಿಯವರಲ್ಲಿ ವಿ.ಹಿ.ಪ ಪರಿವಾರ ಆಗ್ರಹಿಸಿದೆ.