ತಿರುವನಂತಪುರಂ: ಕೇರಳಂನ ಮುಂದಿನ ಮುಖ್ಯಮಂತ್ರಿ ಘೋಷಣೆ ಬಹುತೇಕ ಭಾನುವಾರ ನಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಯಾರು ಎಂಬುದನ್ನು ಘೋಷಣೆ ಮಾಡಲಿದೆ.
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ನಿನ್ನೆ 63 ಕಾಂಗ್ರೆಸ್ ಶಾಸಕರ ಅಭಿಪ್ರಾಯ ಸಂಗ್ರಹಿಸಿರುವ ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕೇನ್ ಈಗಾಗಲೇ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ತಮ್ಮ ವರದಿ ಸಲ್ಲಿಸಿದ್ದಾರೆ.
63 ಕಾಂಗ್ರೆಸ್ ಶಾಸಕರು ಮಾತ್ರವಲ್ಲದೇ ಸಂಸದರು ಮತ್ತು ಯುಡಿಎಫ್ ಪಾಲುದಾರ ಪಕ್ಷಗಳ ನಾಯಕರ ಅಭಿಪ್ರಾಯವೂ ಕಾಂಗ್ರೆಸ್ ಹೈಕಮಾಂಡ್ ಗೆ ವೀಕ್ಷಕರ ವರದಿಯಲ್ಲಿ ಸಲ್ಲಿಕೆಯಾಗಿದೆ.
ಈ ನಡುವೆ ಕೇರಳಂನಲ್ಲಿ ಪೋಸ್ಟರ್ ವಾರ್ ಮುಂದುವರಿದಿದ್ದು, ವಯನಾಡ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಾಂಡೂರ್ ವಿಧಾನಸಭಾ ಕ್ಷೇತ್ರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ವಾಂಡೂರ್ ಕಾಂಗ್ರೆಸ್ ಶಾಸಕ ಎ.ಪಿ. ಅನಿಲ್ ಕುಮಾರ್ ವಿರುದ್ಧ ಮುಸ್ಲಿಂ ಲೀಗ್ ಕಿಡಿಕಾರಿರುವ ಪೋಸ್ಟರ್ ಗಳು ಅಂಟಿಸಲ್ಪಟ್ಟಿವೆ.
ಕೇರಳ ವಿಧಾನಸಭೆ ಕಟ್ಟಡದ ಎದುರು ಕೂಡಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿರುವ ವಿ.ಡಿ. ಸತೀಸನ್ ಮತ್ತು ಕೆ.ಸಿ. ವೇಣುಗೋಪಾಲ್ ಪರವಾದ ಪೋಸ್ಟರ್ ಗಳು ಕಾಣಿಸಿಕೊಂಡಿವೆ.


