Friday, April 26, 2024
Homeಯಕ್ಷಗಾನ‘ಯಕ್ಷ-ಗಾನ’ಲೋಕದ ಕೋಗಿಲೆ ಕಾವ್ಯಶ್ರೀ ನಾಯಕ್ ಆಜೇರು

‘ಯಕ್ಷ-ಗಾನ’ಲೋಕದ ಕೋಗಿಲೆ ಕಾವ್ಯಶ್ರೀ ನಾಯಕ್ ಆಜೇರು

spot_img
- Advertisement -
- Advertisement -

ಆಸಕ್ತಿ, ಛಲ ಅನ್ನೋ ನೀರೆರೆಯುತ್ತಾ ಹೋದಂತೆ ಒಂದು ಚಿಕ್ಕ ಪ್ರತಿಭೆ ಕೂಡ ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಜೀವನದಲ್ಲಿ ತನಗೆ ಒಂದು ಕಲೆಯನ್ನು ಕಲಿಯಬೇಕು ಎಂಬ ಆಸಕ್ತಿಯನ್ನು ಬೆಳೆಸಿಕೊಂಡಾಗ ಮತ್ತು ತಾನು ಮಾಡುವ ಕೆಲಸದಲ್ಲಿ ನಿಷ್ಠೆಯನ್ನು ಇರಿಸಿಕೊಂಡು ಮುಂದುವರಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಯಕ್ಷಲೋಕದಲ್ಲಿ ಅದ್ಬುತವಾದ ಕಂಠಸಿರಿಯ ಮೂಲಕ ಯಕ್ಷ ಗಾಯನವನ್ನು ಹಾಡುವ ಯುವ ಪ್ರತಿಭೆ ಕಾವ್ಯಶ್ರೀ ನಾಯಕ್ ಆಜೇರು ಎಲ್ಲರಿಗೂ ನಿದರ್ಶನ.

ಇವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿ, ಪ್ರಸ್ತುತ ಬಿ.ಎಡ್ ಶಿಕ್ಷಣ ಪಡೆಯುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಅಜೇರು ಗ್ರಾಮದಲ್ಲಿ ಹುಟ್ಟಿ ಬೆಳೆದ ಇವರು ಚಿಕ್ಕಂದಿನಿಂದಲೇ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಐದನೇ ತರಗತಿಯಲ್ಲಿ ತಂದೆಯ ಜೊತೆ ಚೆಂಡೆ ಕಲಿಯಬೇಕು ಎಂಬ ಹಂಬಲದಲ್ಲಿದ್ದ ಇವರು, ಗುರುಗಳಾದ ಮುಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಚೆಂಡೆ ಕಲಿಯಲು ಆರಂಭಿಸಿದರು. ಚೆಂಡೆ ಕಲಿಯುತ್ತಾ ಇದ್ದಾಗಲೇ ಒಂದು ದಿನ ಸುಬ್ರಹ್ಮಣ್ಯ ಭಟ್ ಇವರಿಂದ ಹಾಡನ್ನು ಹಾಡಿಸಲು ಶುರು ಮಾಡಿದರು. ಬಹಳ ಆಸಕ್ತಿಯಿಂದ ಹಾಡನ್ನು ಹಾಡಿದ ಕಾವ್ಯಶ್ರೀ ಅವರ ಕಂಠಸಿರಿಯನ್ನು ಗಮನಿಸಿದ ಅವರು, ನಿಮ್ಮ ಧ್ವನಿ ಬಹಳ ಚೆನ್ನಾಗಿದೆ. ನೀವು ಇನ್ನೂ ಚೆಂಡೆಯನ್ನು ಕಲಿಯುದು ಸಾಕು. ಇನ್ಮುಂದೆ ಹಾಡನ್ನು ಕಲಿಯಿರಿ ಎಂದು ಹೇಳಿದರು. ಅಲ್ಲಿಂದ ಶುರುವಾದ ಇವರ ಗಾಯನದ ಪಯಣ ಉತ್ತಮ ರೀತಿಯಲ್ಲಿ ಬೆಳೆಯುತ್ತಾ ಬಂದಿದೆ ಎನ್ನುತ್ತಾರೆ ಕಾವ್ಯಶ್ರೀ.
ತನ್ನ ಆರನೇ ವಯಸ್ಸಿನಲ್ಲಿ ತಾಳಮದ್ದಲೆಯ ಮೂಲಕ ರಂಗಪ್ರವೇಶವನ್ನು ಮಾಡಿದ ಕಾವ್ಯಶ್ರೀ ಅವರು, ಅನೇಕ ಕಡೆ ಪ್ರದರ್ಶನಗಳನ್ನು ನೀಡುತ್ತಾ ಬರುತ್ತಿದ್ದಾರೆ. ಮೈಸೂರು, ಹುಬ್ಬಳ್ಳಿ, ರಾಜಧಾನಿ ನಗರಿ ಬೆಂಗಳೂರು, ಮುಂಬೈ, ಹರಿದ್ವಾರ, ಚೆನ್ನೈ, ದುಬೈ ಮುಂತಾದ ಕಡೆಗಳಲ್ಲಿ ಹಿರಿಯ ಭಾಗವತರ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ಯಕ್ಷರಂಗದಲ್ಲಿ ಐನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆಯು ಇವರಿಗೆ ಸಲ್ಲುತ್ತದೆ.

ಯಕ್ಷಗಾನದಲ್ಲಿ ಪ್ರಧಾನ ಪಾತ್ರ ಒಬ್ಬರು ಭಾಗವತಿಕರದ್ದೇ ಆಗಿರುತ್ತದೆ. ಪಾತ್ರದ ಎಲ್ಲರ ಭಾವನೆಗಳನ್ನು ಭಾಗವತರು ತನ್ನ ಯಕ್ಷಗಾನದ ಮೂಲಕ ವ್ಯಕ್ತಪಡಿಸಬೇಕಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಕಾವ್ಯ ಅವರು ಪಾತ್ರಕ್ಕೆ ತಕ್ಕಂತೆ ಧ್ವನಿ ಬದಲಾಯಿಸಿಕೊಂಡು ಹಾಡಬಲ್ಲ ಅದ್ಭುತವಾದ ಕಂಠಸಿರಿಯನ್ನು ಹೊಂದಿದ್ದಾರೆ. ತೆಂಕು ಬಡಗಿನ ಹಿರಿಯ ಭಾಗವತರ ಜೊತೆ ಅನೇಕ ಗಾನ ವೈಭವ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಇವರು ಮೇರು ಭಾಗವತರ ಜೊತೆಗೆ ದ್ವಂದ್ವದಲ್ಲೂ ಸೈ ಎನಿಸಿಕೊಂಡಿದ್ದಾರೆ.

ಇವರ ಈ ಎಲ್ಲಾ ಸಾಧನೆಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ. ಕಲಾಸಂಗಮ ಜಿಲ್ಲಾ ಪ್ರಶಸ್ತಿ, ಸುಮ ಸೌರಭ ರಾಜ್ಯ ಪ್ರಶಸ್ತಿ, ನಾದಶ್ರೀ ಪ್ರಶಸ್ತಿ, ಕೊಂಕಣಿ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಪುರಸ್ಕಾರಗಳು ದೊರೆತಿದೆ.

ಶ್ರೀಮತಿ ಉಮಾ ಕಾಮತ್ ಮತ್ತು ಶ್ರೀಪತಿ ನಾಯಕ್ ಅವರ ಪುತ್ರಿಯಾಗಿರುವ ಇವರಿಗೆ ಯಕ್ಷಗಾನದಲ್ಲಿಯೇ ಮತ್ತಷ್ಟು ಸಾಧಿಸುವ ಹಂಬಲ ಇದೆ. ಇವರ ಕನಸಿನಂತೆಯೇ ಯಕ್ಷರಂಗದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಮತ್ತಷ್ಟೂ ಸನ್ಮಾನ ಪುರಸ್ಕಾರಗಳು ಸಿಗಲಿ ಎಂಬುದೇ ನಮ್ಮ ಆಶಯ.

- Advertisement -
spot_img

Latest News

error: Content is protected !!