ಕಾಸರಗೋಡು: ನಗರದ ಹೊರ ವಲಯದ ಚೆಂಗಳ ತೈವಳಪ್ಪು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಬೆಳಕಿಗೆ ಬಂದಿದೆ.
ತಿರುವನಂತಪುರದ ಮೂಲದ ಮಿದ್ ಲಾಜ್ ( 55) , ಪತ್ನಿ ಕಾಸರಗೋಡು ಪೊವ್ವಲ್ ಮಾಸ್ತಿಕುಂಡುವಿನ ಸಾಜಿದಾ ( 33) ಹಾಗೂ ಪುತ್ರ ಫಹಾದ್ (13) ಮೃತಪಟ್ಟವರು. ಇಂದು ಮಧ್ಯಾಹ್ನ ತನಕ ಬಾಗಿಲು ತೆರೆಯದೆ ಇದ್ದುದರಿಂದ ಮನೆಯ ನೆರೆಹೊರೆಯವರು ಕಿಟಿಕಿ ಮೂಲಕ ನೋಡಿದಾಗ ಮನೆಯ ಕೊಠಡಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ.
.ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಬಾಗಿಲು ಒಡೆದು ಒಳಗೆ ತೆರಳಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಿದ್ ಲಾಜ್ ಹೊಲಿಗೆ ವೃತ್ತಿಯನ್ನು ನಡೆಸುತ್ತಿದ್ದರು. ಆರ್ಥಿಕ ಮುಗ್ಗಟ್ಟಿನಿಂದ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.


