Tuesday, July 21, 2026
Homeಕರಾವಳಿಮಂಗಳೂರುಮಂಗಳೂರು: ಅಣ್ಣನಿಂದಲೇ ತಮ್ಮನ  ಕೊಲೆ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

ಮಂಗಳೂರು: ಅಣ್ಣನಿಂದಲೇ ತಮ್ಮನ  ಕೊಲೆ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸ್ವಂತ ತಮ್ಮನನ್ನೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಆರೋಪಿಯನ್ನು ಸುರತ್ಕಲ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಗ್ಯಾಳ ಗ್ರಾಮದ ನಿವಾಸಿ, ಪ್ರಸ್ತುತ ಮಂಗಳೂರು ತಾಲೂಕಿನ ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು ಕೃಷ್ಣಮಠ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಸೋಮನಾಥ (21) ಬಂಧಿತ ಆರೋಪಿ.

ಘಟನೆಯ ವಿವರ: ಕಳೆದ 5 ವರ್ಷಗಳಿಂದ ಚೊಕ್ಕಬೆಟ್ಟುವಿನಲ್ಲಿ ಶಿವಲೀಲಾ ಮತ್ತು ಅವರ ಇಬ್ಬರು ಮಕ್ಕಳಾದ ಸೋಮನಾಥ ಹಾಗೂ ಮಲ್ಲಿಕಾರ್ಜುನ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಿನಾಂಕ 19-07-2026ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಮಲ್ಲಿಕಾರ್ಜುನನು ಯಾವುದೋ ಹುಡುಗಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದಕ್ಕೆ ಅಣ್ಣ ಸೋಮನಾಥ ವಿರೋಧ ವ್ಯಕ್ತಪಡಿಸಿದ್ದನು. ಈ ವೇಳೆ ಮಲ್ಲಿಕಾರ್ಜುನನು ಉಡಾಫೆಯಿಂದ ಬೈದಿದ್ದರಿಂದ ಕೋಪಗೊಂಡ ಸೋಮನಾಥ, ತಮ್ಮ ಮಲಗಿದ ನಂತರ ಮನೆಯಲ್ಲಿದ್ದ ಕೊಡಲಿಯಿಂದ ಆತನ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದನು.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 89/2026, ಕಲಂ 103(1) ಬಿ.ಎನ್.ಎಸ್) ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕೃಷ್ಣಾಪುರ ಮಠ ರಸ್ತೆಯ ಬಳಿಯ ಪೊದೆಯಲ್ಲಿ ಅವಿತ ಕುಳಿತಿದ್ದ ಆರೋಪಿ ಸೋಮನಾಥನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

Latest News

error: Content is protected !!