ಬೆಳಗಾವಿ: ಡಿಸೆಂಬರ್ 21ರಿಂದ ಜನವರಿ 19 ರವರೆಗೆ ಒಂದು ತಿಂಗಳ ಕಾಲ ಮಂಗಳೂರಿನಲ್ಲಿ ಕರಾವಳಿ ಉತ್ಸವ ನಡೆಯಲಿದೆ.ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಈ ವಿಷಯ ತಿಳಿಸಿದ್ದಾರೆ.
ಸುಮಾರು ಒಂದು ತಿಂಗಳ ಕಾಲ ಬೀಚ್ ಉತ್ಸವ, ಕರಕುಶಲ ಪ್ರದರ್ಶನ, ವಸ್ತು ಪ್ರದರ್ಶನ ನಡೆಯಲಿವೆ. ಕಳೆದ ಎರಡು, ಮೂರು ವರ್ಷಗಳಿಂದ ಕರಾವಳಿ ಉತ್ಸವ ನಡೆದಿರಲಿಲ್ಲ, ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲ ಇತರೇ ಜಿಲ್ಲೆಗಳ ಜನರು ಕೂಡಾ ಕರಾವಳಿ ಉತ್ಸವವನ್ನು ಆನಂದಿಸಬಹುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಕರಾವಳಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 50 ಲಕ್ಷ ರೂಪಾಯಿ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ 20 ಲಕ್ಷ ರೂಪಾಯಿ ಬಿಡುಗಡೆ ಆಗಿದೆ.
ಜನವರಿ 4 ಮತ್ತು 5 ರಂದು ಕದ್ರಿ ಪಾರ್ಕ್ ನಲ್ಲಿ ಆಟೋಮೊಬೈಲ್ ಮತ್ತು ಶ್ವಾನ ಪ್ರದರ್ಶನ ನಡೆಯಲಿದ್ದು,
ಜನವರಿ 11 ಮತ್ತು 12 ರಂದು ಕದ್ರಿ ಪಾರ್ಕ್ ನಲ್ಲಿ ಯುವ ಉತ್ಸವ ಜರುಗಲಿದೆ. ಅಲ್ಲದೇ, ಜನವರಿ 18 ಮತ್ತು 19 ರಂದು ತಣ್ಣೀರು ಬಾವಿ ಬೀಚ್ ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಕೂಡಾ ನಡೆಯಲಿದೆ.


