ಶಿಶಿಲ: ಕೊರೋನಾ ಲಾಕ್ ಡೌನ್ ನಿಂದಾಗಿ ನಾಡಿನ ಎಲ್ಲ ದೇವಸ್ಥಾನ, ಚರ್ಚ್, ಮಸೀದಿ ಹಾಗು ಇತರ ಪ್ರಾರ್ಥನಾ ಮಂದಿರಗಳು ಮುಚ್ಚಲ್ಪಟ್ಟಿದೆ. ಇದರಿಂದ ದೇವಸ್ಥಾನದ ಕೆರೆಯಲ್ಲಿರುವ ಮತ್ತು ದೇವಸ್ಥಾನದ ಪಕ್ಕದಲ್ಲಿರುವ ನದಿಗಳ ಮೀನು ಆಹಾರಗಳಲ್ಲಿದೆ ಸಂಕಷ್ಟ ಎದುರಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಿಲ್ಲೆಯ ಮತ್ಸ್ಯ ತೀರ್ಥವೆಂದೇ ಖ್ಯಾತಿ ಪಡೆದಿರುವ ಶಿಶಿಲ ಶ್ರೀ ಶಿಶಿಲೇಶ್ವರ ದೇವಾಲಯದ ಸನಿಹದಲ್ಲಿ ಹರಿದು ಹೋಗುತ್ತಿರುವ ಕಪಿಲ ನದಿಯ ದೇವರ ಮೀನುಗಳ ಬಗ್ಗೆ ನಿಮ್ಮ “ಮಹಾ ಎಕ್ಸ್ಪ್ರೆಸ್” ಸುದ್ದಿ ಜಾಲ ವಿಸ್ತೃತವಾದ ವರದಿ ಮಾಡಿತ್ತು. ಈ ವರದಿಗೆ ಮತ್ಸ್ಯ ಪ್ರೇಮಿಗಳಿಂದ ಮತ್ತು ಪರಿಸರ ಪ್ರೇಮಿಗಳಿಂದ ಅಪಾರ ಮೆಚ್ಚುಗೆಯ ಮಾತು ಗಳು ಬಂದಿದ್ದವು.
ಈ “ಮಹಾ ಎಕ್ಸ್ಪ್ರೆಸ್”ನ ಕಾಳಜಿಯನ್ನು ಗಮನಿಸಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ತಕ್ಷಣವೇ ದೇವರ ಮೀನುಗಳಿಗೆ ತಕ್ಷಣಕ್ಕೆ ಬೇಕಾಗುವ 4 ಚೀಲ ಹರಳುಗಳನ್ನು ದೇವಾಲಯದ ಆಡಳಿತ ಮಂಡಳಿಗೆ ತಲುಪಿಸಿದ್ದಾರೆ. ಈ ಬಗ್ಗೆ ಹರುಷ ವ್ಯಕ್ತ ಪಡಿಸಿರುವ ಮತ್ಸ್ಯ ಹಿತರಕ್ಷಣಾ ಸಮಿತಿಯ ಅದ್ಯಕ್ಷ ಶಿಶಿಲ ಜಯರಾಮ ನೆಲ್ಲಿತ್ತಾಯ, “ಶಾಸಕ ಹರೀಶ್ ಪೂಂಜರ ಸಾಮಾಜಿಕ ಬದ್ಧತೆಗೆ ನಾವು ಧನ್ಯವಾದ ತಿಳಿಸುತ್ತೇವೆ. ಕ್ಷೇತ್ರದ ಒಡೆಯ ಶ್ರೀ ಶಿಶಿಲೇಶ್ವರನ ಆಶೀರ್ವಾದ ಸದಾ ಶಾಸಕ ಹರೀಶ್ ಪೂಂಜರ ಉತ್ತಮ ಕಾರ್ಯದ ಮೇಲಿರಲಿ” ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಕಾರಣಿಕದ ಕ್ಷೇತ್ರವಾಗಿರುವ ಶಿಶಿಲ ಶ್ರೀ ಶಿಶಿಲೇಶ್ವರ ದೇವಾಲಯ ಭಕ್ತಿಗೆ ಹೆಸರುವಾಸಿಯಾಗುವುದರೊಂದಿಗೆ ದೇವಾಲಯದ ದೇವರ ಮೀನುಗಳಿಗೂ ಪ್ರಸಿದ್ಧ. ದೇವರ ಮೀನು ನೋಡಲು ಧರ್ಮಭೇಧವಿಲ್ಲದೆ ಜಿಲ್ಲೆಯ ಹೆಚ್ಚಿನ ಭಾಗದಿಂದ ಜನರು ಬರುತ್ತಾರೆ. ಆದರೆ ಪ್ರಸ್ತುತ ಕೊರೋನಾ ಲಾಕ್ ಡೌನ್ ನಿಂದಾಗಿ ದೇವರ ಮೀನುಗಳು ಆಹಾರಕ್ಕಾಗಿ ಪರಿತಪಿಸುತ್ತಿದೆ. ದೇವರ ಮೀನುಗಳಿಗೆ ಆಹಾರ ನೀಡಲು ಇಚ್ಚಿಸಿರುವ ಈ ಭಾಗದ ಭಕ್ತರು ಅಥವಾ ಮತ್ಯಪ್ರೇಮಿಗಳು ನಿಮ್ಮ ಶಕ್ತಿಯ ಅನುಸಾರ ಮೀನುಗಳಿಗೆ ಹರಳು (ಪೊರಿ) ಅಥವಾ ಅಕ್ಕಿಯನ್ನು ದೇವಾಲಯದ ಆಡಳಿತ ಮಂಡಳಿಗೆ ಒಪ್ಪಿಸಬಹುದು ಮತ್ತು ಕೊರೋನಾ ಲಾಕ್ ಡೌನ್ ನಿಂದಾಗಿ ಗುಂಪಾಗಿ ಬರದೇ ಒಬ್ಬೊಬ್ಬರಾಗಿ ಬಂದು ನಿಮ್ಮ ಸಹಾಯಹಸ್ತವನ್ನು ಚಾಚಬೇಕೆಂದು ಮತ್ಸ್ಯ ಹಿತರಕ್ಷಣಾ ಸಮಿತಿಯ ಅದ್ಯಕ್ಷ ಶಿಶಿಲ ಜಯರಾಮ ನೆಲ್ಲಿತ್ತಾಯ ಮನವಿ ಮಾಡಿಕೊಂಡಿದ್ದಾರೆ.
ದಾನಿಗಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9448622805