ನವದೆಹಲಿ: ರಾಷ್ಟ್ರೀಯ ಹೆದ್ದಾರಿ 66 ರ ಮೂಲ ಡಿಸೈನ್ ನಲ್ಲಿ ಆಗಿರುವ ಲೋಪದೋಷಗಳಿಂದ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕರಾವಳಿಯ ಜನಪ್ರತಿನಿಧಿಗಳ ನೇತೃತ್ವದ ನಿಯೋಗ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಬಗ್ಗೆ ಅಧ್ಯಯನ ನಡೆಸಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಚಹರೆಗಳನ್ನು ಪುನರ್ ನಿರ್ಮಿಸಬೇಕೆಂದು ಇದಕ್ಕಾಗಿ ಪೂರ್ಣ ಅಧ್ಯಯನ ಮತ್ತು ಪರಿಹಾರಕ್ಕಾಗಿ ಉನ್ನತ ಮಟ್ಟದ ತಜ್ಞ ಇಂಜಿನಿಯರ್ ಗಳ ಸಮಿತಿಯೊಂದನ್ನು ರಚಿಸುವಂತೆಯೂ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಜನಪ್ರತಿನಿಧಿಗಳ ನಿಯೋಗ, ಮಂಗಳೂರಿನ ನಂತೂರು ಜಂಕ್ಷನ್ ಸೇರಿದಂತೆ ಉಡುಪಿಯ ಅಂಬಲಪಾಡಿಯ ಮೇಲ್ಸೇತುವೆ, ಕಟಪಾಡಿ, ಬ್ರಹ್ಮಾವರದ ಆಕಾಶವಾಣಿಯ ತಿರುವಿನ ಅಂಡರ್ ಪಾಸ್ ನ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದೆ.
ಮನವಿ ಸ್ವೀಕರಿಸಿದ ಕೇಂದ್ರ ಸಚಿವ ಗಡ್ಕರಿ, ಅಪಘಾತಗಳು ಸೇರಿದಂತೆ ವಾಹನ ಒತ್ತಡಗಳ ಸ್ಥಳವನ್ನು ಪರಿಶೀಲಿಸಿ ಸಂಪೂರ್ಣ ವೀಡಿಯೋ ರೆಕಾರ್ಡ್ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರಲ್ಲದೇ, ಕಲ್ಯಾಣಪುರ – ಸಂತೆಕಟ್ಟೆ ಮತ್ತು ಮಣಿಪಾಲದ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಚುರುಕಾಗಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ಮತ್ತು ಕರಾವಳಿ ರಸ್ತೆಗಳ ಸುಧಾರಣೆಗಾಗಿ ಸೆಂಟ್ರಲ್ ರೋಡ್ ಫಂಡ್ ನಿಂದ ರಾಜ್ಯಕ್ಕೆ ಅನುದಾನ ನೀಡುವುದಾಗಿಯೂ ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ಬ್ರಹ್ಮಾವರ, ಕೋಟ ಮತ್ತು ಕುಂದಾಪುರ ರಸ್ತೆ ದುರಸ್ತಿಯ ಬಗ್ಗೆಯೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ನಿತಿನ್ ಗಡ್ಕರಿ ಗಮನಕ್ಕೆ ತಂದರು.
ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಉಡುಪಿ ಶಾಸಕರಲ ಯಶ್ ಪಾಲ್ ಸುವರ್ಣ, ಉದ್ಯಮಿ ಜಿ. ಶಂಕರ್ ಬಿಜೆಪಿ ಮುಖಂಡ ಸುರೇಶ್ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.