Tuesday, June 30, 2026
HomeUncategorizedಮಂಗಳೂರು; ಆಳ ಸಮುದ್ರದಲ್ಲಿ ಸವಾಲಿನ ರಕ್ಷಣಾ ಕಾರ್ಯಾಚರಣೆ: ಮುಳುಗುತ್ತಿದ್ದ ಬೋಟ್‌ನಲ್ಲಿದ್ದ 6 ಮೀನುಗಾರರನ್ನು ರಕ್ಷಿಸಿದ ಕೋಸ್ಟ್...

ಮಂಗಳೂರು; ಆಳ ಸಮುದ್ರದಲ್ಲಿ ಸವಾಲಿನ ರಕ್ಷಣಾ ಕಾರ್ಯಾಚರಣೆ: ಮುಳುಗುತ್ತಿದ್ದ ಬೋಟ್‌ನಲ್ಲಿದ್ದ 6 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್!

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ತೀವ್ರ ಪ್ರತಿಕೂಲ ಹವಾಮಾನದ ನಡುವೆಯೂ ಭಾರತೀಯ ತಟ ರಕ್ಷಣಾ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಆಳ ಸಮುದ್ರದಲ್ಲಿ ಅತ್ಯಂತ ಸವಾಲಿನ ಕಾರ್ಯಾಚರಣೆಯೊಂದನ್ನು ನಡೆಸಿ, ಅಪಾಯದಲ್ಲಿದ್ದ ಆರು ಮಂದಿ ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಿದೆ. ನಿನ್ನೆ ರಾತ್ರಿ ಮಂಗಳೂರಿನಿಂದ ಸುಮಾರು 33 ನಾಟಿಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ಈ ರೋಮಾಂಚನಕಾರಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಉಡುಪಿ ಮೂಲದ ‘ಮಂಜು ಮಾತಾ’* ಹೆಸರಿನ ಮೀನುಗಾರಿಕಾ ಬೋಟ್ ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ಆಕಸ್ಮಿಕವಾಗಿ ಬೋಟ್‌ನ ತಳಭಾಗಕ್ಕೆ ಹಾನಿಯಾಗಿದೆ. ಪರಿಣಾಮವಾಗಿ ಸಮುದ್ರದ ನೀರು ವೇಗವಾಗಿ ಬೋಟ್‌ನೊಳಗೆ ನುಗ್ಗಲು ಆರಂಭಿಸಿದೆ. ಬೋಟ್ ಸಂಪೂರ್ಣವಾಗಿ ಮುಳುಗುವ ಸ್ಥಿತಿ ತಲುಪಿದಾಗ, ಅದರಲ್ಲಿದ್ದ ಆರು ಮಂದಿ ಮೀನುಗಾರರು ತಕ್ಷಣವೇ ಕರಾವಳಿ ರಕ್ಷಣಾ ಪಡೆಗೆ ತುರ್ತು ಸಂದೇಶ (SOS) ರವಾನಿಸಿದ್ದಾರೆ. ಮೀನುಗಾರರಿಂದ ತುರ್ತು ಸಂದೇಶ ಲಭಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು, ಸಮುದ್ರದಲ್ಲೇ ಗಸ್ತಿನಲ್ಲಿದ್ದ ತಟ ರಕ್ಷಣಾ ಪಡೆಯ ಅತ್ಯಾಧುನಿಕ ಹಡಗು ‘ICG ಸಚೇತ್  ಅನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಿದರು.

ಸಮುದ್ರದಲ್ಲಿ ಭಾರಿ ಅಲೆಗಳು ಮತ್ತು ಪ್ರತಿಕೂಲ ಹವಾಮಾನ ಇದ್ದುದರಿಂದ ಕಾರ್ಯಾಚರಣೆ ತೀವ್ರ ಸವಾಲಿನಿಂದ ಕೂಡಿತ್ತು. ಆದರೂ ಧೃತಿಗೆಡದ ಕೋಸ್ಟ್ ಗಾರ್ಡ್ ಯೋಧರು ಕತ್ತಲಲ್ಲಿ ಮುಳುಗುತ್ತಿದ್ದ ‘ಮಂಜು ಮಾತಾ’ ಬೋಟ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕೇವಲ 90 ನಿಮಿಷಗಳ ನಿರಂತರ ಕಾರ್ಯಾಚರಣೆಯಲ್ಲಿ ಬೋಟ್‌ನಲ್ಲಿದ್ದ ಎಲ್ಲಾ ಆರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೋಸ್ಟ್ ಗಾರ್ಡ್ ಯೋಧರು ಅತ್ಯಾಧುನಿಕ *‘ರಿಮೋಟ್-ಆಪರೇಟೆಡ್ ಲೈಫ್‌ಬಾಯ್ಸ್’ (Remote-Operated Lifebuoys)* ಗಳನ್ನು ಬಳಸುವ ಮೂಲಕ ಮೀನುಗಾರರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಸದ್ಯ ರಕ್ಷಿಸಲ್ಪಟ್ಟ ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದು, ಕೋಸ್ಟ್ ಗಾರ್ಡ್ ಯೋಧರ ಈ ಸಾಹಸಿಕ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!