Tuesday, October 27, 2026
Homeಕರಾವಳಿಎಸ್ಐಆರ್ ಅಂತಿಮ ಪಟ್ಟಿ ಪ್ರಕಟ; ದ.ಕ. ಜಿಲ್ಲೆಯಲ್ಲಿ ಒಟ್ಟು 16,78,448 ಮತದಾರರು; 9,064 ಮತದಾರರು ಹೊರಕ್ಕೆ...

ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ; ದ.ಕ. ಜಿಲ್ಲೆಯಲ್ಲಿ ಒಟ್ಟು 16,78,448 ಮತದಾರರು; 9,064 ಮತದಾರರು ಹೊರಕ್ಕೆ ; ಜಿಲ್ಲಾಧಿಕಾರಿ ದರ್ಶನ್ ಎಚ್.ವಿ

- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಪರಿಷ್ಕರಣೆ ವೇಳೆ ಮರಣ ಹೊಂದಿದವರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರು ಸೇರಿದಂತೆ ಒಟ್ಟು 9,064 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 16,78,448 ಮತದಾರರು ನೋಂದಾಯಿತರಾಗಿದ್ದಾರೆ ಎಂದು ತಿಳಿಸಿದರು. ಇವರಲ್ಲಿ 8,23,198 ಪುರುಷರು, 8,55,232 ಮಹಿಳೆಯರು ಹಾಗೂ 18 ತೃತೀಯ ಲಿಂಗಿ ಮತದಾರರು ಇದ್ದಾರೆ ಎಂದು ವಿವರಿಸಿದರು.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ ನೋಂದಾಯಿತರಾಗಿರುವ ಮತದಾರರ ಸಂಖ್ಯೆ ಹೀಗಿದೆ:
ಬೆಳ್ತಂಗಡಿ – 2,22,254, ಮೂಡುಬಿದಿರೆ – 1,97,712, ಮಂಗಳೂರು ನಗರ ಉತ್ತರ – 2,27,530, ಮಂಗಳೂರು ನಗರ ದಕ್ಷಿಣ – 2,12,512, ಮಂಗಳೂರು – 1,98,956, ಬಂಟ್ವಾಳ – 2,15,710, ಪುತ್ತೂರು – 2,04,181, ಸುಳ್ಯ – 1,99,593

41,125 ಮತದಾರರ ಹೊಸ ಸೇರ್ಪಡೆ; ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 16,46,387 ಮತದಾರರಿದ್ದರು. ಕರಡು ಪಟ್ಟಿ ಪ್ರಕಟವಾದ ಬಳಿಕ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಹೊಸದಾಗಿ 41,125 ಮತದಾರರ ಸೇರ್ಪಡೆಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ನಮೂನೆ-6ರಲ್ಲಿ 32,986, ನಮೂನೆ-6Aರಲ್ಲಿ 357 ಹಾಗೂ ನಮೂನೆ-8ರಲ್ಲಿ 7,782 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಅಂತಿಮ ಪಟ್ಟಿಯಲ್ಲಿ ನೋಟಿಸ್ ನೀಡಿದ ಬಳಿಕ 32,061 ಮತದಾರರು ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ ಮರಣ ಹಾಗೂ ಶಾಶ್ವತ ಸ್ಥಳಾಂತರ ಸೇರಿದಂತೆ ವಿವಿಧ ಕಾರಣಗಳಿಂದ 9,064 ಹೆಸರುಗಳನ್ನು ಕೈಬಿಡಲಾಗಿದೆ. ಮತದಾರರ ವಿವರಗಳ ತಿದ್ದುಪಡಿಗೆ ಸಂಬಂಧಿಸಿದಂತೆ 53,806 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ 25,326 ಯುವ ಮತದಾರರು; ಜಿಲ್ಲೆಯಲ್ಲಿ 18ರಿಂದ 19 ವರ್ಷದೊಳಗಿನ ಒಟ್ಟು 25,326 ಯುವ ಮತದಾರರಿದ್ದಾರೆ. ಕರಡು ಪಟ್ಟಿಯಲ್ಲಿ 12,418 ಯುವ ಮತದಾರರು ಇದ್ದರೆ, ಪರಿಷ್ಕರಣೆ ಸಂದರ್ಭದಲ್ಲಿ ಹೊಸದಾಗಿ 12,908 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಇದಲ್ಲದೆ, ಜಿಲ್ಲೆಯಲ್ಲಿ 13,420 ಅಂಗವಿಕಲ ಮತದಾರರಿದ್ದು, ಇವರಲ್ಲಿ 7,607 ಪುರುಷರು ಹಾಗೂ 5,813 ಮಹಿಳೆಯರಿದ್ದಾರೆ. 85 ವರ್ಷ ಮೇಲ್ಪಟ್ಟ 14,086 ಹಿರಿಯ ನಾಗರಿಕರು, 366 ಅನಿವಾಸಿ ಭಾರತೀಯ (NRI) ಮತದಾರರು ಹಾಗೂ 449 ಸೇವಾ ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಅವಕಾಶ; ಸಾರ್ವಜನಿಕರು ತಮ್ಮ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಲು ಮತದಾರರ ನೋಂದಣಾಧಿಕಾರಿ (ERO), ಸಹಾಯಕ ಮತದಾರರ ನೋಂದಣಾಧಿಕಾರಿ (AERO) ಕಚೇರಿಗಳು ಅಥವಾ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಬಹುದು. ಇದಲ್ಲದೆ, www.ceokarnataka.kar.nic.in, https://voters.eci.gov.in ಹಾಗೂ www.dk.nic.in ವೆಬ್‌ಸೈಟ್‌ಗಳ ಮೂಲಕವೂ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 1950 ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿಯಲಿದ್ದು, ಅರ್ಹ ನಾಗರಿಕರು ಹೆಸರು ಸೇರ್ಪಡೆ, ವಿವರಗಳ ತಿದ್ದುಪಡಿ ಹಾಗೂ ವಿಳಾಸ ಬದಲಾವಣೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಉಪಸ್ಥಿತರಿದ್ದರು.

- Advertisement -

Latest News

error: Content is protected !!