Tuesday, October 27, 2026
Homeಪ್ರಮುಖ-ಸುದ್ದಿ‘A’ ಸಿನಿಮಾ ಖ್ಯಾತಿಯ ನಿರ್ಮಾಪಕ ಸಿಲ್ಕ್ ಮಂಜು ನಿಧನ

‘A’ ಸಿನಿಮಾ ಖ್ಯಾತಿಯ ನಿರ್ಮಾಪಕ ಸಿಲ್ಕ್ ಮಂಜು ನಿಧನ

- Advertisement -
- Advertisement -

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕ ಸಿಲ್ಕ್ ಮಂಜು ಅವರು ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ನಟ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ‘A’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದ ಅವರು, ಕಳೆದ ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

‘ಹಗಲು ವೇಷ’, ‘ಪ್ರತ್ಯರ್ಥ’, ‘A’, ‘ಸೂರ್ಯಕಾಂತಿ’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಸೈಕಿಕ್’ ಹಾಗೂ ‘ಟೆರರ್’ ಸೇರಿದಂತೆ ಹಲವು ಸಿನಿಮಾಗಳನ್ನು ಸಿಲ್ಕ್ ಮಂಜು ನಿರ್ಮಿಸಿದ್ದರು. ಉಪೇಂದ್ರ, ಶಿವರಾಜ್‌ಕುಮಾರ್, ದಿಗಂತ್, ರಮೇಶ್ ಅರವಿಂದ್ ಹಾಗೂ ಆ ದಿನಗಳು ಖ್ಯಾತಿಯ ಚೇತನ್ ಸೇರಿದಂತೆ ಅನೇಕ ಕಲಾವಿದರ ಸಿನಿಮಾಗಳ ನಿರ್ಮಾಣದಲ್ಲಿ ಅವರು ಗುರುತಿಸಿಕೊಂಡಿದ್ದರು.

ಕುಟುಂಬದವರ ಮಾಹಿತಿ ಪ್ರಕಾರ, ಸಿಲ್ಕ್ ಮಂಜು ಅವರು ‘ಟೆರರ್’ ಸಿನಿಮಾವನ್ನು ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದರು. ಚಿತ್ರಕ್ಕಾಗಿ 2ರಿಂದ 3 ಕೋಟಿ ರೂಪಾಯಿ ಸಾಲ ಮಾಡಿದ್ದಲ್ಲದೆ, ಸಿನಿಮಾ ಯಶಸ್ಸು ತಂದುಕೊಡಲಿದೆ ಎಂಬ ನಿರೀಕ್ಷೆಯಲ್ಲಿ ತಮ್ಮ ಮನೆಯನ್ನು ಕೂಡ ಅಡಮಾನ ಇಟ್ಟಿದ್ದರು ಎನ್ನಲಾಗಿದೆ. ಆದರೆ, ಸಿನಿಮಾ ನಿರೀಕ್ಷಿತ ಯಶಸ್ಸು ಕಾಣದ ಕಾರಣ ಅವರು ಭಾರೀ ಆರ್ಥಿಕ ನಷ್ಟ ಅನುಭವಿಸಬೇಕಾಯಿತು.

ಒಂದೆಡೆ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದ ನಿರ್ಮಾಪಕ, ಮತ್ತೊಂದೆಡೆ ಸಾಲ ಮತ್ತು ಅನಾರೋಗ್ಯದ ಸಂಕಷ್ಟಕ್ಕೆ ಸಿಲುಕಿ ಬದುಕಿನ ಕೊನೆಯ ದಿನಗಳಲ್ಲಿ ತೀವ್ರ ತೊಂದರೆ ಅನುಭವಿಸಿದ್ದು, ಅವರ ನಿಧನದ ಸುದ್ದಿ ಚಿತ್ರರಂಗದಲ್ಲಿ ವಿಷಾದ ಮೂಡಿಸಿದೆ.

- Advertisement -

Latest News

error: Content is protected !!