ತಮಿಳುನಾಡು: ಕೈದಿಯೊಬ್ಬನಿಗೆ ಮೂರ್ಚೆ ರೋಗ (ಫಿಟ್ಸ್) ಬಂದಂತೆ ನಾಟಕವಾಡಿ, ಜೈಲು ಸಿಬ್ಬಂದಿ ಮೇಲೆ ಭೀಕರ ದಾಳಿ ನಡೆಸಿದ 17 ಕೈದಿಗಳು ಉಪ-ಜೈಲಿನಿಂದ ಸರಣಿಯಾಗಿ ಪರಾರಿಯಾದ ಆಘಾತಕಾರಿ ಘಟನೆ ತಮಿಳುನಾಡಿನ ಥೇನಿ ಜಿಲ್ಲೆಯ ತೆಕ್ಕಂಪಟ್ಟಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. ಪರಾರಿಯಾದ 17 ಮಂದಿಯಲ್ಲಿ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದು, ಉಳಿದ 14 ಕೈದಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಪೊಲೀಸ್ ಇಲಾಖೆಯ ಮಾಹಿತಿಯಂತೆ, ಒಂದೇ ಸೆಲ್ನಲ್ಲಿದ್ದ ಕೈದಿಗಳು ಸೋಮವಾರ ತಡರಾತ್ರಿ ಸಹ-ಕೈದಿಗೆ ಫಿಟ್ಸ್ ಬಂದಿದೆ ಎಂದು ನಾಟಕವಾಡಿದ್ದಾರೆ. ಇದನ್ನು ನಂಬಿ ಸಿಬ್ಬಂದಿ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆ, ಕೈದಿಗಳು ಒಟ್ಟಾಗಿ ದಾಳಿ ನಡೆಸಿ ಪರಾರಿಯಾಗಿದ್ದಾರೆ. ದಾಳಿಯಲ್ಲಿ ತಂಗಪಾಂಡಿ ಎಂಬ ಪೊಲೀಸ್ ಸಿಬ್ಬಂದಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಇಬ್ಬರು ಸಿಬ್ಬಂದಿಗೂ ಗಾಯಗಳಾಗಿವೆ ಎಂದು ದಕ್ಷಿಣ ವಲಯ ಐಜಿಪಿ ವಿಜಯೇಂದ್ರ ಬಿದರಿ ತಿಳಿಸಿದ್ದಾರೆ.
ಪರಾರಿಯಾದವರ ಪೈಕಿ ಜೈಲಿನ ಹಿಂಭಾಗದ ಅರಣ್ಯ ಪ್ರದೇಶದಲ್ಲಿದ್ದ ಮಧುರೈ ಮೂಲದ ಒಬ್ಬ ಕೈದಿ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಉಳಿದವರಿಗಾಗಿ 17 ವಿಶೇಷ ತನಿಖಾ ತಂಡಗಳನ್ನು ರಂಗಕ್ಕಿಳಿಸಲಾಗಿದ್ದು, ನೆರೆಯ ಮಧುರೈ, ದಿಂಡಿಗಲ್ ಹಾಗೂ ಕೇರಳದ ಇಡುಕ್ಕಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 16 ಪ್ರಮುಖ ಕಡೆಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ವಾಹನ ತಪಾಸಣೆ ನಡೆಸಲಾಗುತ್ತಿದೆ ಎಂದು ದಿಂಡಿಗಲ್ ಎಸ್ಪಿ ಎಸ್. ಜಯಕುಮಾರ್ ತಿಳಿಸಿದ್ದಾರೆ.
ಅತ್ಯಂತ ಭದ್ರತೆಯ ಉಪ-ಜೈಲಿನಿಂದಲೇ ಕೈದಿಗಳು ಪರಾರಿಯಾಗಿರುವುದು ತಮಿಳುನಾಡಿನಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಸರ್ಕಾರದ ಭದ್ರತಾ ಲೋಪವನ್ನು ತೀವ್ರವಾಗಿ ಖಂಡಿಸಿರುವ ಡಿಎಂಕೆ ರಾಜ್ಯಸಭಾ ಸಂಸದ ಪಿ. ವಿಲ್ಸನ್, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ವೈಫಲ್ಯಕ್ಕೆ ನೈತಿಕ ಹೊಣೆ ಹೊರಬೇಕೆಂದು ಒತ್ತಾಯಿಸಿದ್ದಾರೆ.


