ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಶಾಲೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟು ಬೈಕ್ ಸವಾರ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿ ಗಾಯಗೊಂಡಿರುವ ಘಟನೆ ಬನಶಂಕರಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಾಯಂಡಹಳ್ಳಿ ನಿವಾಸಿ ಕೀರ್ತನ (16) ಮೃತ ದುರ್ದೈವಿ.
ಈಕೆಯ ಅಕ್ಕ ಹರ್ಷಿತಾ (18)ಳೊಂದಿಗೆ ಕನಕಪುರ ಬಳಿಯ ಹಾರೋಹಳ್ಳಿಗೆ ಹೋಗಿದ್ದು, ಅಲ್ಲಿಂದ ಇಂದು ಬೆಳಗ್ಗೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬಂದಿದ್ದಾರೆ. ನಾಯಂಡಹಳ್ಳಿಯಲ್ಲಿರುವ ತಮ್ಮ ಮನೆಗೆ ಹೋಗಲು ತಡವಾಗುತ್ತದೆ ಎಂದು ಸ್ನೇಹಿತ ದರ್ಶನ್‌ನನ್ನು ಅಲ್ಲಿಗೆ ಬರುವಂತೆ ತಿಳಿಸಿದ್ದಾರೆ.
ಅಲ್ಲಿಗೆ ದ್ವಿಚಕ್ರವಾಹನದಲ್ಲಿ ಬಂದ ದರ್ಶನ್ (21) ಜತೆ ಕೀರ್ತನ ಮತ್ತು ಹರ್ಷಿತಾ ಹೊರಟರು. ಕಿತ್ತೂರು ರಾಣಿ ಚೆನ್ನಮ್ಮ ಜಂಕ್ಷನ್‌ನಿಂದ ಕಾಮಾಕ್ಯಕಡೆ ಹೋಗುವಾಗ ಫೈಓವರ್ ಮೇಲಿಂದ ಬೆಳಗ್ಗೆ 9 ಗಂಟೆ ಸಮಯದಲ್ಲಿ ಬರುತ್ತಿದ್ದ ಶಾಲೆ ಬಸ್‌ವೊಂದು ಹೋಟೆಲ್ ಒಂದರ ಮುಂಭಾಗ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ದರ್ಶನ್, ಕೀರ್ತನ ಮತ್ತು ಹರ್ಷಿತ ಕೆಳಗೆ ಬಿದ್ದಿದ್ದಾರೆ. ಆ ವೇಳೆ ಹಿಂದಿನಿಂದ ಬಂದ ಬಸ್ ಕೀರ್ತನ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೀರ್ತನ ಮೃತ ದೇಹವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿರಿಸಿದ್ದು, ಈ ಸಂಬಂಧ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೀರ್ತನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಳು, ಹರ್ಷಿತ ಎರಡನೇ ವರ್ಷದ ಪಿಯುಸಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾಳೆ ಎಂದು ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.


