
ಕಾರ್ಕಳ; ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಂದಾಯ ನಿರೀಕ್ಷಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ, ನಂದಳಿಕೆ ನಿವಾಸಿ ಶಿವಪ್ರಸಾದ್ ರಾವ್ ಮೃತರು.
ಭಾನುವಾರ ಸಂಜೆ ಶಿವಪ್ರಸಾದ್ ರಾವ್ ಅವರು ಕಾರ್ಕಳದಿಂದ ತಮ್ಮ ಸ್ಕೂಟರಿನಲ್ಲಿ ನಂದಳಿಕೆಯಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಶಿವತಿಕೆರೆ ಸಮೀಪದ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ, ಸ್ಕೂಟರ್‌ನ ಇಂಡಿಕೇಟರ್ ನೀಡಿ ಯೂಟರ್ನ್ ಪಡೆಯಲು ಮುಂದಾಗಿದ್ದರು. ಇದೇ ವೇಳೆ ಹಿಂದಿನಿಂದ ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದ ಬೈಕ್ ಒಂದು ಅವರ ಸ್ಕೂಟರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಶಿವಪ್ರಸಾದ್ ರಾವ್ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಗಾಯಗಳ ತೀವ್ರತೆ ಹೆಚ್ಚಿದ್ದ ಕಾರಣ, ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಕಂದಾಯ ಇಲಾಖೆಯಲ್ಲಿ ಅತ್ಯಂತ ಕರ್ತವ್ಯನಿಷ್ಠ ಹಾಗೂ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದ್ ರಾವ್ ಅವರ ನಿಧನಕ್ಕೆ ತಾಲೂಕು ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.


