
ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತೊಟ್ಟು ಸಮೀಪದ ಸಣ್ಣಂಪಾಡಿ ಎಂಬಲ್ಲಿ ಶುಕ್ರವಾರ ಸಂಜೆ ಬಿಎಂಡಬ್ಲ್ಯು (BMW) ಕಾರೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಇಡೀ ಕಾರು ಹೆದ್ದಾರಿಯಲ್ಲೇ ಧಗಧಗನೆ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ಈ ಐಷಾರಾಮಿ ಕಾರು ಗೋಳಿತೊಟ್ಟು ಸಮೀಪದ ಸಣ್ಣಂಪಾಡಿ ತಲುಪಿದಾಗ, ಇಂಜಿನ್ನಲ್ಲಿ ದಿಢೀರನೆ ತಾಂತ್ರಿಕ ದೋಷ ಕಾಣಿಸಿಕೊಂಡು ಹೊಗೆ ಬರಲಾರಂಭಿಸಿದೆ. ಇದನ್ನು ತಕ್ಷಣವೇ ಗಮನಿಸಿದ ಚಾಲಕ ಕಾರನ್ನು ಹೆದ್ದಾರಿಯ ಬದಿಗೆ ನಿಲ್ಲಿಸಿದ್ದಾರೆ. ಕಾರಿಗೆ ಬೆಂಕಿ ವ್ಯಾಪಿಸುವ ಮುನ್ನವೇ ಒಳಗಿದ್ದ ನಾಲ್ವರೂ ಪ್ರಯಾಣಿಕರು ತಕ್ಷಣವೇ ಹೊರಗೆ ಓಡಿ ಬಂದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಅವರು ಕೆಳಗಿಳಿಯುತ್ತಿದ್ದಂತೆ ಇಡೀ ಕಾರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಭಸ್ಮವಾಗಿದೆ.


