
ಕಾರ್ಕಳದ ಶಿವತಿಕೆರೆ ಸಮೀಪ ರವಿವಾರ (ಜು. 12) ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಕಳ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್ (ನಂದಳಿಕೆ) ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಅಂದು ರಾತ್ರಿ ಸುಮಾರು 7:30ರ ವೇಳೆಗೆ ಅವರು ತಮ್ಮ ಸ್ಕೂಟಿಯಲ್ಲಿ ನಂದಳಿಕೆಯಲ್ಲಿರುವ ಮನೆಗೆ ಮರಳುತ್ತಿದ್ದಾಗ, ಶಿವತಿಕೆರೆ ಪೆಟ್ರೋಲ್ ಬಂಕ್ ಬಳಿ ಇಂಡಿಕೇಟರ್ ಹಾಕಿ ಯೂ-ಟರ್ನ್ ತೆಗೆದುಕೊಳ್ಳಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಅತಿ ವೇಗವಾಗಿ ಬಂದ ಬೈಕ್ ಇವರ ಸ್ಕೂಟಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಶಿವಪ್ರಸಾದ್ ರಾವ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ, ಗಾಯಗಳ ತೀವ್ರತೆಯಿಂದಾಗಿ ಅವರು ಮೃತಪಟ್ಟಿದ್ದಾರೆ.
ಕಂದಾಯ ಇಲಾಖೆಯ ಕರ್ತವ್ಯನಿಷ್ಠ ಅಧಿಕಾರಿಯಾಗಿದ್ದ ಶಿವಪ್ರಸಾದ್ ರಾವ್ ಅವರ ಅಕಾಲಿಕ ನಿಧನಕ್ಕೆ ತಾಲೂಕು ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯರು ತೀವ್ರ ಕಂಬನಿ ಮಿಡಿದಿದ್ದಾರೆ.


