ಬೆಳ್ತಂಗಡಿ : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರದ ವಿಚಾರವಾಗಿ ಎಸ್‌ಐಟಿ ವರದಿಯಲ್ಲಿ ಒಳಗೊಂಡಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನವನ್ನು ಸಂತ್ರಸ್ಥರು ಎಂದು ಪರಿಗಣಿಸುವಂತೆ ಧರ್ಮಸ್ಥಳ ಕ್ಷೇತ್ರದ ಪರ ವಕೀಲರ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಾದವನ್ನು ಮಂಡಿಸಿದರು. ಬಳಿಕ ವಿಚಾರಣೆಯನ್ನು ಜ.3ಕ್ಕೆ ಮುಂದೂಡಲಾಯಿತು.
ಧರ್ಮಸ್ಥಳದ ಪರ ಹಿರಿಯ ನ್ಯಾಯವಾದಿ ಬೆಂಗಳೂರಿನ ಸಿ.ವಿ.ನಾಗೇಶ್ ಅವರು ಡಿ.31 ರಂದು ಹೆಚ್ಚುವರಿ ಸಿವಿಲ್ ನ್ಯಾಯಾಲಯದ ವಿಜಯೇಂದ್ರ ಟಿ.ಎಚ್.ಅವರು ಮುಂದೆ ವಾದವನ್ನು ಮಂಡಿಸಿದರು. ಸುದೀರ್ಘ ವಾದ ಮಂಡನೆಯ ಬಳಿಕ ವಿಚಾರಣೆಯನ್ನು ಮುಂದೂಡಲಾಯಿತು.
ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಕುರಿತು ಹಿರಿಯ ನ್ಯಾಯವಾದಿ ಮಹೇಶ್ ಕಜೆ ಅವರು ವಿಚಾರಣೆಯ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿ, ಧರ್ಮಸ್ಥಳ ಕ್ಷೇತ್ರವನ್ನು ಸಂತ್ರಸ್ಥರು ಎಂಬ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಆರೋಪಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಎಂದು ಉಲ್ಲೇಖಿಸಿ ಹಿಂದೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿ ತನಿಖೆಗೆ ಒತ್ತಾಯಿಸಿದರು. ಬಳಿಕ ಅದನ್ನು ಕೋರ್ಟ್ ವಜಾಗೊಳಿಸಿತ್ತು. ಆದರೆ ಹಾಕಿದ ಅರ್ಜಿಯಲ್ಲಿ ಧರ್ಮಸ್ಥಳ ದೇವಸ್ಥಾನವನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಗಮನದಲ್ಲಿಟ್ಟುಕೊಂಡು ಸಂತ್ರಸ್ಥರ ನೆಲೆಯಲ್ಲಿ ಸ್ವತಃ ಅವರಿಗೂ ಕೂಡ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶವನ್ನು ನೀಡಬೇಕು ಎಂದು ಪ್ರಸ್ತುತ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ.
ಮುಂದಿನ ವಿಚಾರಣೆಗೆ ಜ.3ಕ್ಕೆ ದಿನ ನಿಗದಿ ಮಾಡಲಾಗಿದೆ. ಹೆಚ್ಚುವರಿ ದೂರುದಾರರಾಗಿ ಅಥವಾ ಸಂತ್ರಸ್ತರಾಗಿ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕೋರಿ ಅರ್ಜಿ ಸಲ್ಲಿಸಿ ವಾದವನ್ನು ಮಂಡಿಸಲಾಗಿದೆ. ಜತೆಗೆ ಪ್ರಕರಣಕ್ಕೆ ಪೂರಕವಾದ ಸುಪ್ರಿಂಕೋರ್ಟ್ ಹಿಂದಿನ ಆದೇಶಗಳ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.
ಈ ಅರ್ಜಿ ಸಂಬಂದಿಸಿ ಬುರುಡೆ ಗ್ಯಾಂಗ್ ಆಕ್ಷೇಪ ವ್ಯಕ್ತಪಡಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಯಾವುದೇ ರೀತಿಯ ಆಕ್ಷೇಪವನ್ನು ವ್ಯಕ್ತಪಡಿಸಿಲ್ಲ. ಬದಲಾಗಿ ಅವರ ಅರ್ಜಿ ಸಲ್ಲಿಕೆಯಾಗಿದ್ದು, ಅದಕ್ಕೂ ನಮ್ಮ ಅರ್ಜಿಗೂ ಸಂಬಂಧವಿಲ್ಲ. ಅದರ ಅರ್ಜಿಗೆ ನ್ಯಾಯಾಲಯ ಅವಕಾಶ ಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ನಮ್ಮ ಅರ್ಜಿಗೆ ಆಕ್ಷೇಪ ಸಲ್ಲಿಸುವ ಅಂಶಗಳಿಲ್ಲ ಎಂದರು. ಬೆಂಗಳೂರಿನ ಖ್ಯಾತ ವಕೀಲ ಸಿ.ವಿ.ನಾಗೇಶ್ ಜೊತೆ ವಕೀಲರುಗಳಾದ ರಾಜಶೇಖರ್, ಪುತ್ತೂರಿನ ಮಹೇಶ್ ಕಜೆ,ಸುನಿಲ್ , ಚಂದನ್ ,ಪ್ರದೀಪ್ ,ಕೇಶವ ಬೆಳಾಲ್ ಭಾಗಿಯಾಗಿದ್ದರು.


