ಉಡುಪಿ: ಸ್ಕೂಟರ್ ಕಳ್ಳತನದ ಆರೋಪಿಯನ್ನು ಪೊಲೀಸರು ಬಂಧಿಸಿದಾಗ ಕಳ್ಳನೊಬ್ಬ ಅಸಲೀಯತ್ತು ಗೊತ್ತಾಗಿದೆ.
ವಿದ್ಯಾರ್ಥಿಯೊಬ್ಬನ ಸ್ಕೂಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿರ್ವ ಪೊಲೀಸರು ಓಂ ಕೋಲಾರ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಈತನೊಬ್ಬ ಅಂತರ್ ಜಿಲ್ಲಾ ಬೈಕ್ ಕಳ್ಳ ಅನ್ನೋದು ಗೊತ್ತಾಗಿದೆ. ಬಂಧಿತನಿಂದ ಸುಮಾರು 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿಸೆಂಬರ್ 5 ರಂದು ವಿದ್ಯಾರ್ಥಿ ಕೌಶಿಕ್ ತನ್ನ ಹೊಂಡಾ ಆಕ್ಟಿವಾ ಸ್ಕೂಟರ್ ನ್ನು ಮಧ್ಯಾಹ್ನದ ಸಂದರ್ಭ ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸ್ಕೂಟರ್ ಪಾರ್ಕ್ ಮಾಡಿದ್ದರು. ಊಟ ಮುಗಿಸಿ ವಾಪಸ್ ಬಂದಾಗ ಸ್ಕೂಟರ್ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಉಡುಪಿ, ಮಲ್ಪೆ, ಕಾರ್ಕಳ ಹಾಗೂ ಧರ್ಮಸ್ಥಳ ಸೇರಿದಂತೆ ವಿವಿಧ ಭಾಗಗಳಲ್ಲಿ ಜಾಲ ಬೀಸಿದ್ದ ತಂಡವು ಕೊನೆಗೆ ಓಂ ಕೋಲಾರ ಎಂಬಾತನನ್ನು ಬಂಧಿಸಿದೆ.
ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೇವಲ ಶಿರ್ವ ಮಾತ್ರವಲ್ಲದೆ, ಕಾಪು ಮತ್ತು ಬೆಂಗಳೂರು ನಗರದ ವಿವಿಧೆಡೆ ಬೈಕ್ ಕಳವು ಮಾಡಿರುವುದು ಪತ್ತೆಯಾಗಿದೆ. ಬಂಧಿತನಿಂದ ಶಿರ್ವ ಠಾಣೆಗೆ ಸಂಬಂಧಿಸಿದ ಒಂದು ಬೈಕ್ ಹಾಗೂ ಕಾಪು ಮತ್ತು ಬೆಂಗಳೂರಿನಲ್ಲಿ ಕಳವು ಮಾಡಿದ್ದ ಉಳಿದ ನಾಲ್ಕು ಬೈಕ್‌ಗಳು ಸೇರಿದಂತೆ ಒಟ್ಟು 5 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


