Thursday, June 4, 2026
Homeಕೊಡಗುಕೊಡಗಿನಲ್ಲಿ ಬೇಟೆಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವು

ಕೊಡಗಿನಲ್ಲಿ ಬೇಟೆಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವು

- Advertisement -
- Advertisement -

ಕೊಡಗು: ಬೇಟೆಗೆ ತೆರಳಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದೆ.ವಿರೂಪಾಕ್ಷಪುರ ಗ್ರಾಮದ ನಿವಾಸಿ, ಆಟೋ ಚಾಲಕ ವಿನೋದ್(29) ಸಾವನ್ನಪ್ಪಿದ ಯುವಕ.

ಸೋಮವಾರ ವಿನೋದ್ ತನ್ನ ಸ್ನೇಹಿತರಾದ ಧರ್ಮ, ಯೋಗೇಶ್, ಈಶ್ವರ ಎಂಬವರೊಂದಿಗೆ ಬೇಟೆಗೆ ತೆರಳಿದ್ದರು. ಗ್ರಾಮದ ನದಿ ದಾಟಿ ಬೈಲುಕೊಪ್ಪ ಪೋಲಿಸ್ ಠಾಣಾ ವ್ಯಾಪ್ತಿಯ ಕಾಡಿಗೆ ತೆರಳಿದ್ದಾರೆ. ಆದರೆ ಮೂವರು ಮಾತ್ರ ಹಿಂತಿರುಗಿದ್ದರು. ವಿನೋದ್ ಮರಳಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಪತ್ನಿ ಅನುಷಾ ಬುಧವಾರ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದಾರೆ. ಆದರೆ ಇಂದು ಕಾವೇರಿ ನದಿಯಲ್ಲಿ ವಿನೋದ್ ಮೃತ ದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸೋಮವಾರ ಮಧ್ಯಾಹ್ನದ ವೇಳೆಗೆ ಈ ನಾಲ್ವರು ಬೇಟೆಗೆ ಊರಿನ ಮಧ್ಯೆಯೇ ಗನ್ ಹಿಡಿದುಕೊಂಡು ಹೋಗಿದ್ದಾರೆ. ಅವರು ಕಾವೇರಿ ನದಿಯನ್ನು ದಾಟಿಕೊಂಡು ಹೋಗುವುದನ್ನು ಇಡೀ ಊರಿನ ಜನರು ನೋಡಿದ್ದಾರೆ. ಆದರೆ ಅಂದು ಯೋಗೇಶ್, ಈಶ್ವರ ಮತ್ತು ಧರ್ಮ ಮನೆಗೆ ವಾಪಸ್ ಬಂದ ಬಳಿಕ ವಿನೋದ್ ಮನೆಗೆ ಆಗಾಗ ಹೋಗಿ ಆತ ಮರಳಿ ಬಂದಿದ್ದಾನಾ? ಎಂದು ಕೇಳಿದ್ದಾರೆ. ಹೀಗಾಗಿ ವಿನೋದ್ ಮನೆಯರು ಅನುಮಾನಗೊಂಡು, ನಿನ್ನೆ ಪತ್ನಿ ಅನುಷಾ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲು ಮಾಡಿದ್ದಾರೆ. 

ಇಂದು ಬೆಳಗ್ಗೆ ಬಾಳುಗೋಡು ವ್ಯಾಪ್ತಿಯ ಕಾವೇರಿ ನದಿ ದಂಡೆಯಲ್ಲಿ ವಿನೋದ್ ಮೃತದೇಹ ಪತ್ತೆಯಾಗಿದೆ. ಬೇಟೆಗೆ ಹೋಗಿದ್ದ ಸಂದರ್ಭ ಆಕಸ್ಮಿಕವಾಗಿ ಗುಂಡು ತಗುಲಿದೆಯೋ ಅಥವಾ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದಾರೋ ಎನ್ನುವ ಅನುಮಾನ ಕುಟುಂಬಸ್ಥರಿಗೆ ಕಾಡಿದೆ. ಆದರೆ ಬೇಟೆಗೆ ತೆರಳಿದ್ದ ಯೋಗೇಶ್, ಈಶ್ವರ ಈಗ ತಲೆಮರೆಸಿಕೊಂಡಿದ್ದು, ಧರ್ಮ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!