Monday, April 29, 2024
Homeಕರಾವಳಿಮಂಗಳೂರಿನಿಂದ ಮುಂಬೈಗೆ ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ: ಐವರು ಯುವಕರಿಗೆ ತಲಾ 1100 ರೂ. ದಂಡ...

ಮಂಗಳೂರಿನಿಂದ ಮುಂಬೈಗೆ ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ: ಐವರು ಯುವಕರಿಗೆ ತಲಾ 1100 ರೂ. ದಂಡ ಹಾಗೂ ಒಂದು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

spot_img
- Advertisement -
- Advertisement -

ಉಡುಪಿ: ಮಂಗಳೂರಿನಿಂದ ಮುಂಬೈಗೆ ಬುಧವಾ (ನಿನ್ನೆ) ತೆರಳುತ್ತಿದ್ದ ನಂ.12620 ಮತ್ಸ್ಯಗಂಧ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಕೇರಳದ ಐವರು ಯುವಕರಿಗೆ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯ ತಲಾ 1100 ರೂ. ದಂಡ ಹಾಗೂ ಒಂದು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಲ್ಲದೇ  ದಂಡ ಪಾವತಿಸದಿದ್ದರೆ ಇನ್ನೂ ಒಂದು ತಿಂಗಳು ಜೈಲಿನಲ್ಲಿರುವಂತೆ ಸೂಚಿಸಿ ತೀರ್ಪು ನೀಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಐವರು ಯುವಕರು ಕೇರಳದವರಾಗಿದ್ದು, ಗೋವಾಕ್ಕೆ ಪ್ರವಾಸ ಕೈಗೊಂಡಿದ್ದರು. ಮಧ್ಯಾಹ್ನದ ರೈಲಿನಲ್ಲಿ ಮಂಗಳೂರಿನಿಂದ ಟಿಕೇಟ್ ಇಲ್ಲದೇ ಪ್ರಯಾಣಿಸುತಿದ್ದ ಇವರು, ಟಿಕೆಟ್ ಕೇಳಿದ ಟಿಸಿಗೆ ದಬಾಯಿಸಿದ್ದರು. ಈ ವೇಳೆ ರೈಲ್ವೆ ಪೊಲೀಸ್ ಪಡೆಯ (ಆರ್‌ಪಿಎಫ್) ಎಎಸ್‌ಐ ಸುಧೀರ್ ಶೆಟ್ಟಿ ಹಾಗೂ ಮಹಿಳಾ ಕಾನ್‌ಸ್ಟೇಬಲ್ ಝೀನಾ ಪಿಂಟೊ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಐವರನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಉಡುಪಿ ಆರ್‌ಪಿಎಫ್ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ಆರ್‌ಪಿಎಫ್ ಕಚೇರಿಯಲ್ಲಿ ಮತ್ತಷ್ಟು ಕೆಟ್ಟದ್ದಾಗಿ ವರ್ತಿಸಿದ ಐವರು ವಿದ್ಯಾರ್ಥಿಗಳು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಟ್ಟ ಪದಗಳಿಂದ ಹರಿಹಾಯ್ದರೆಂದು ಎನ್ನಲಾಗಿದೆ. ಇದರಿಂದ ಪೊಲೀಸರು ಐವರ ವಿರುದ್ಧ ಆರ್‌ಸಿ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಿದ್ದಲ್ಲದೇ ಎಲ್ಲರನ್ನೂ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರಿಗೆ ಟಿಕೇಟ್ ರಹಿತ ಪ್ರಯಾಣಕ್ಕಾಗಿ ತಲಾ 1000ರೂ. ದಂಡ ಹಾಗೂ ಕೆಟ್ಟ ವರ್ತನೆಗಾಗಿ ತಲಾ 100 ರೂ.ನಂತೆ ದಂಡ ವಿಧಿಸಿದರು. ಆರೋಪಿಗಳು ದಂಡ ಕಟ್ಟಲು ವಿಫಲರಾಗಿದ್ದರಿಂದ, ಎಲ್ಲರನ್ನೂ ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯ 30ದಿನಗಳ (ಒಂದು ತಿಂಗಳ) ಸಾದಾ ಜೈಲು ಶಿಕ್ಷೆ ಹಾಗೂ ತಲಾ 1100ರೂ. ದಂಡ ವಿಧಿಸಿ ತೀರ್ಪು ನೀಡಿತು. ಒಂದು ತಿಂಗಳೊಳಗೆ ದಂಡ ಪಾವತಿಸಲು ವಿಫಲರಾದರೆ, ಜೈಲು ಶಿಕ್ಷೆಯನ್ನು ಇನ್ನು ಒಂದು ತಿಂಗಳಿಗೆ ವಿಸ್ತರಿಸುವಂತೆ ಸೂಚನೆ ನೀಡಿತು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಜುನೈದ್ (24), ಸುಜಿತ್ (23), ವಿಷ್ಣು (24), ಯೂನಿಸ್ (24) ಹಾಗೂ ಮಿಸ್ಬಾ (24) ಶಿಕ್ಷೆಗೊಳಗಾದ ವಿದ್ಯಾರ್ಥಿಗಳು. ಇವರೆಲ್ಲರೂ ಕಲ್ಲಿಕೋಟೆ ಜಿಲ್ಲೆಯ ಥರಿಯಾದ್ ಕಟ್ಟಿಪಾರಾದವರೆಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!