ಬೆಳ್ತಂಗಡಿ: ಇತ್ತೀಚಿಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ರವರು 833.69 ಕೋಟಿ ಅನುದಾನದ ಬಗ್ಗೆ ನೀಡಿದ ತಪ್ಪು ಲೆಕ್ಕವನ್ನು ಎತ್ತಿ ತೋರಿಸಿದ್ದೆ, ಅಲ್ಲದೆ ಅವರನ್ನು ಬಹಿರಂಗ ಚರ್ಚೆಗೂ ಆಹ್ವಾನಿಸಿದ್ದೆ. ಆದರೆ ಇದರ ಬಗ್ಗೆ ಜಾಣ ಮೌನ ವಹಿಸಿರುವ ಶಾಸಕರು ಸವಾಲನ್ನು ಸ್ವೀಕರಿಸದೆ ಪಲಾಯನಗೈಯುವ ಮೂಲಕ ಅವರು ಕೊಟ್ಟಿರುವ ಲೆಕ್ಕದಲ್ಲಿ ತಪ್ಪು ಇರುವುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಬೆಳ್ತಂಗಡಿ ನಾರಾಯಣಗುರು ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಶಾಸಕ ಕೆ ಪ್ರತಾಪ ಸಿಂಹ ನಾಯಕ ರವರು ನಾನು ಕೇಳಿದ ಲೆಕ್ಕದ ಬಗ್ಗೆ ನನ್ನ ಸಲಹಾ ಸಮಿತಿಗೆ ಲೆಕ್ಕ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎನ್ನುವ ಬಾಲಿಶ ಪ್ರತಿಕ್ರಿಯೆಯನ್ನು ನೀಡಿ ನನ್ನನ್ನು ಮತ್ತು ನನ್ನ ಪಕ್ಷದ ನಾಯಕರನ್ನು ಎತ್ತಿ ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದರು.
ಇತ್ತೀಚಿಗೆ ಪತ್ರಿಕೆಯವರು 75 ನೇ ಸ್ವಾತಂತ್ರೋತ್ಸವದ ಅಂಗವಾಗಿ, ಶಾಸಕರಿಂದ ಆಗಬೇಕಾದ ಕೆಲಸಗಳ ಪಟ್ಟಿಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಚಾರ ಮುಕ್ತಗೊಳಿಸುವುದು ಎಂಬ ವಿಚಾರ ಮೊದಲ ಸ್ಥಾನದಲ್ಲಿತ್ತು. ಈ ಬಗ್ಗೆ ಪ್ರತಿಕ್ರಿಸಿದ ಹರೀಶ್ ಪೂಂಜಾರವರು ಭ್ರಷ್ಟಾಚಾರವನ್ನು ಮೂಲದಿಂದಲೇ ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ನನ್ನ ಪ್ರಕಾರ ಮೂಲ ಎಂದರೆ ಶಾಸಕ ಹರೀಶ್ ಪಂಜಾವರೇ ಆಗಿದ್ದಾರೆ. ಅವರು ಶಾಸಕರಾದ ಮೂಲದಲ್ಲಿ 5 ಪರ್ಸೆಂಟೇಜ್‌ಕಮಿಷನ್ ತೆಗೆದುಕೊಳ್ಳುತ್ತಾರೆ. ಅದು ಈಗ 20% ತಲುಪಿದೆ. ಅಲ್ಲದೆ ಐದು ಕೋಟಿಗೂ ಮೀರಿದ ಅನುದಾನದ ಕೆಲಸವನ್ನು ತನ್ನದೇ ಮಾಲೀಕತ್ವದ ಬಿಮಲ್ ಕನ್‌ಸ್ಟ್ರಕ್ಷನ್ ಮೂಲಕ ಕೆಲಸ ಮಾಡಿಸುತ್ತಿದ್ದಾರೆ. ಅಧಿಕಾರಿಗಳಲ್ಲಿ ಎಸ್ಟಿಮೇಟ್ ಮಾಡುವ ಸಂದರ್ಭದಲ್ಲಿ ಎಸ್ಟಿಮೇಟ್‌ಗಿಂತ 150% 100% ಹೆಚ್ಚು ಎಸ್ಟಿಮೇಟ್ ಮಾಡಿಸುತ್ತಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಶಾಸಕರೇ ಭ್ರಷ್ಟಾಚಾರದಲ್ಲಿ ನಂಬರ್1 ಸ್ಥಾನದಲ್ಲಿದ್ದಾರೆ ಎಂದರು. ತಾಲೂಕು ಕಚೇರಿಯಲ್ಲಿ ಶಾಸಕ ಹರೀಶ್ ಪೂಂಜಾರವರ ನೇತ್ರತ್ವದ ನವಶಕ್ತಿ ಬಳಗದವರು ನಡೆಸುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ಯಾಕೆ ಗೊತ್ತಾಗುತ್ತಿಲ್ಲ. ತಹಶೀಲ್ದಾರ್ ಮತ್ತು ತಾಲೂಕು ಕಚೇರಿಯ ಕಲ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದು ಇದೇ ಮುಂದುವರೆದರೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಅನಿವಾರ್ಯವಾದೀತು ಎಂದಿದ್ದಾರೆ
ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾರ ಅಮಾಯಕರಿಂದ ಕೋಟಿಗಟ್ಟಲೆ ಲಂಚ ಪಡೆದಿದ್ದಾರೆ. ಲಂಚ ನೀಡಿದವರ ಪೈಲುಗಳು ಒಂದೇ ದಿನದಲ್ಲಿ ಆದೇಶ ಆಗುತ್ತಿದ್ದು, ಬಡವರ ಕಡತಗಳು ಪುತ್ತೂರು ಎ.ಸಿ.ಕಛೇರಿಯಲ್ಲಿ ಕೊಳೆತು ನಾರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಎ.ಸಿ.ಯವರು ಪಡಕೊಂಡ ಎರಡು ಲಕ್ಷ ಲಂಚದ ಹಣವನ್ನು ಸಂಬಂಧಪಟ್ಟವರಿಗೆ ವಾಪಾಸುಕೊಡಿಸಿದ ವಿಚಾರ ಬೆಳ್ತಂಗಡಿಯಾದ್ಯಂತ ಪ್ರಚಾರ ಅಗಿದ್ದು ಈ ವಿಚಾರ ಎತ್ತಲು ಪ್ರತಾಪಸಿಂಹರಿಗಾಗಲೀ ಶಾಸಕರಿಗಾಗಲೀ ಯಾಕೆ ಆಗುತ್ತಿಲ್ಲ. ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಮತ್ತು ಎ.ಸಿ.ಕಚೇರಿಯಲ್ಲಿನ ಲಂಚಗುಳಿತನದ ಬಗ್ಗೆ ಹಲವಾರು ಸಾರ್ವಜನಿಕರು ನನ್ನ ಬಳಿ ದೂರು ನೀಡಿದ್ದು ಇದನ್ನು ನಿಲ್ಲಿಸಲು ಸಾಧ್ಯವಾಗದಿದ್ದಲ್ಲಿ ಈ ಕಛೇರಿಗಳಿಗೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ತಾನು ಭೇಟಿ ನೀಡಿ ಕೈಗೊಳ್ಳಬೇಕಾಗುತ್ತದೆ ಎಂದರು.
2ವರ್ಷಗಳ ಹಿಂದೆ ತಾಲೂಕಿನಲ್ಲಿ ಸುಮಾರು 16ಗ್ರಾಮಗಳಲ್ಲಿ ಬಂದ ನೆರೆ ಅನೇಕ ಮನೆಗಳನ್ನು ಕೊಚ್ಚಿಕೊಂಡು ಹೋಯಿತು, ಕೃಷಿ ನಾಶ ಆಯಿತು. ದನ ಕರುಗಳು ನೆರೆಯಲ್ಲಿ ಕೊಚ್ಚಿಹೋದವು. ಕೇವಲ ಕೆಲವರಿಗೆ ಮನೆಗೆ ಕೊಚ್ಚಿ ಹೋದ ಕೃಷಿಗೆ, ನೆರೆಯಲ್ಲಿ ಕೊಚ್ಚಿ ಹೋದ ದನ ಕರುಗಳಿಗೆ ಪರಿಹಾರ ಸಿಕ್ಕಿತ್ತು. ಅನೇಕ ಕಾಂಗ್ರೆಸ್ಸಿಗರ ಮನೆ, ಕೃಷಿ ನಾಶ ಆಗಿತ್ತು. ಅಂತವರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ನೆರೆಯಲ್ಲಿ ಯಾವುದೇ ಮನೆ, ಕೃಷಿ ನಾಶವಾಗದೇ ನೆರೆಯಲ್ಲಿ ದನ ಕರುಗಳು ಕೊಚ್ಚಿ ಹೋಗದೆ ಇದ್ದ ಬಿಜೆಪಿ ಪಕ್ಷದ ಮುಖಂಡರುಗಳು ಕೆಲವು ಅಧಿಕಾರಿಗಳಿಗೆ ಲಂಚ ಕೊಟ್ಟು ಮನೆ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ನೈಜ ಸಂತಸ್ತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದು ಈ ಮೂಲಕ ಆಗ್ರಹಿಸಿ ಅವರಿಗೆ ಪತ್ರವನ್ನು ಸಹ ಬರೆಯುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ನ್ಯಾಯವಾದಿ ಕೇಶವ ಪಿ ಬೆಳಾಲು, ನ.ಪಂ ಸದಸ್ಯರಾದ ರಾಜಶ್ರೀ ರಮಣ್, ಜನಾರ್ದನ ಕುಲಾಲ್, ಜಗದೀಶ ಡಿ, ಮುಸ್ತರ ಜಾನ್ ಮೆಹಬೂಬ್, ಮನೋಹರ ಇಳಂತಿಲ ಮೊದಲಾದವರು ಉಪಸ್ಥಿತರಿದ್ದರು.


