ಹೈದರಾಬಾದ್: ಆನ್ಲೈನ್ ಗೇಮ್ ನ ಚಟಕ್ಕೆ ಬಿದ್ದು 16 ಲಕ್ಷ ಕಳೆದುಕೊಂಡು ವ್ಯಕ್ತಿಯೊಬ್ಬ ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಎಲ್ಬಿ ನಗರ ನಿವಾಸಿಯಾದ ಜಗದೀಶ್ ಆನ್ಲೈನ್ ಗೇಮ್ ಚಟದಿಂದಾಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ. ಅಲ್ಲದೆ ಸಾಲ ತೀರಿಸಲು ಅಸಾಧ್ಯವಾಗಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೆಲವು ದಿನಗಳ ಹಿಂದೆ ಜಗದೀಶ್ ತಂದೆ 16 ಲಕ್ಷ ರೂ. ಸಾಲ ತೀರಿಸಿದ್ದರು. ಆದರೆ ಈತ ಮತ್ತೆ ಆನ್ಲೈನ್ ಆಟಗಳನ್ನು ಆಡಲು ಪ್ರಾರಂಭಿಸಿದ. ಇದರೊಂದಿಗೆ ಜಗದೀಶ್ ಸಂಪೂರ್ಣವಾಗಿ ಭಾರೀ ಸಾಲದ ಸುಳಿಯಲ್ಲಿ ಸಿಲುಕಿಕೊಂಡ. ಇದರಿಂದ ಖಿನ್ನತೆಗೊಳಗಾಗಿ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಡಿಯೋದಲ್ಲಿ ಜಗದೀಶ್ ಆತ್ಮಹತ್ಯೆಗೆ ಕಾರಣಗಳನ್ನು ತಿಳಿಸಿದ್ದಾನೆ. ಈ ಸಂಬಂಧ ಜಗದೀಶ್ ಪೋಷಕರು ನೀಡಿರುವ ದೂರು ಸ್ವೀಕರಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ