ಮಂಗಳೂರು: ಮೈಸೂರು ದಸರಾ ಕಂಬಳದ ಆರು ವಿಭಾಗಗಳಿಗೆ ಆಯ್ಕೆಯಾದ ಕೋಣಗಳ ಅಧಿಕೃತ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯ ಕಂಬಳ ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಅಸೋಸಿಯೇಶನ್ ಸಮಿತಿಗಳು ಜಂಟಿಯಾಗಿ 173 ಜೋಡಿ ಕೋಣಗಳ ಪಟ್ಟಿಯನ್ನು ಸಿದ್ಧಪಡಿಸಿ ದಸರಾ ಸಮಿತಿಗೆ ಸಲ್ಲಿಸಿದ್ದವು. ಇದೀಗ ಅಂತಿಮ ಪರಿಶೀಲನೆಯ ಬಳಿಕ 150 ಜೋಡಿ ಕೋಣಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೋಣಗಳ ಯಜಮಾನರು ಮೈಸೂರಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೂಚಿಸಿದ್ದಾರೆ. ಅಕ್ಟೋಬರ್ 17ರಂದು ಬೆಳಗ್ಗೆ 8 ಗಂಟೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೈಸೂರಿಗೆ ಪ್ರಯಾಣ ಆರಂಭಿಸಲಾಗುವುದು. ಈ ಸಂದರ್ಭದಲ್ಲಿ ಕೋಣಗಳ ಯಜಮಾನರಿಗೆ ಪಾಸ್ಗಳನ್ನು ವಿತರಿಸಲಾಗುತ್ತದೆ.
ಮಧ್ಯಾಹ್ನ 12 ಗಂಟೆಗೆ ಕುಶಾಲನಗರ ತಲುಪಲಿದ್ದು, ಅಲ್ಲಿ ಕೋಣಗಳಿಗೆ ಎರಡು ಗಂಟೆಗಳ ವಿಶ್ರಾಂತಿ ನೀಡಲಾಗುತ್ತದೆ. ಬಳಿಕ ಸಂಜೆ ವೇಳೆಗೆ ಮೈಸೂರು ತಲುಪುವಂತೆ ಯೋಜನೆ ರೂಪಿಸಲಾಗಿದೆ. ಮೈಸೂರು ದಸರಾ ಕಂಬಳವು ಅಕ್ಟೋಬರ್ 18 ಮತ್ತು 19ರಂದು ನಡೆಯಲಿದೆ.


