ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗೊಂದು ಮುಳುಗಿದೆ ಎನ್ನಲಾದ ಘಟನೆ ವರದಿಯಾಗಿದೆ. ಇದರ ಬೆನ್ನಲ್ಲೇ ಸಮುದ್ರದಲ್ಲಿ ಐಫೋನ್ಗಳು ಹಾಗೂ ಐಷಾರಾಮಿ ಸುಗಂಧ ದ್ರವ್ಯಗಳ ಬಾಟಲಿಗಳು ತೇಲುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಿಂಗಾಪುರದ ಧ್ವಜ ಹೊಂದಿದ್ದ ‘ಜಿಎಫ್ಎಸ್ ಪ್ರೈಡ್’ (GFS Pride) ಕಂಟೈನರ್ ಹಡಗು ದುಬೈನಿಂದ ಐಫೋನ್ಗಳು ಸೇರಿದಂತೆ ವಿವಿಧ ಸರಕುಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದೆ. ಹಡಗಿನಲ್ಲಿದ್ದ ಸುಮಾರು 2,500 ಕಂಟೈನರ್ಗಳ ಪೈಕಿ ಕೆಲವು ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ತೇಲುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಸ್ಥಳೀಯರು ಸಣ್ಣ ದೋಣಿಗಳ ಮೂಲಕ ತೆರಳಿ ಸಮುದ್ರದಲ್ಲಿ ತೇಲುತ್ತಿದ್ದ ದುಬಾರಿ ವಸ್ತುಗಳನ್ನು ಸಂಗ್ರಹಿಸುತ್ತಿರುವ ದೃಶ್ಯಗಳೂ ವೈರಲ್ ಆಗಿವೆ.
ಹಡಗು ಅನುಮತಿಯಿಲ್ಲದ ಮಾರ್ಗದಲ್ಲಿ ಸಾಗುತ್ತಿದ್ದಾಗ ನೌಕಾ ಮೈನ್ಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಆದರೆ, ಅಪರಿಚಿತ ಕ್ಷಿಪಣಿ ಅಥವಾ ಇತರ ಪ್ರಕ್ಷೇಪಕದ ದಾಳಿಯಿಂದ ಹಡಗು ಮುಳುಗಿರಬಹುದು ಎಂದು ಕಡಲ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳ ಆತಂಕ ಹೆಚ್ಚಾಗಿದೆ. ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ ಕನಿಷ್ಠ ಐದು ಹಡಗುಗಳ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ.


