ಉಡುಪಿ:ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಹೆಕ್ಕಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಆಯುಧದಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಪರಮೇಶಿ ಅಲಿಯಾಸ್ ಪರಮ್ ವೇಲಿ (55) ಕೊಲೆಯಾದ ವ್ಯಕ್ತಿ. ಕಳೆದ 3 ವರ್ಷಗಳಿಂದ ಬಂದರು ಭಾಗದಲ್ಲಿ ಗುಜರಿ ಆಯುತ್ತಿದ್ದ ಇವರು, ‘ಮಲ್ಪೆ ಮರೈನ್ ಏಜೆನ್ಸಿಸ್’ ಮತ್ತು ಮೀನು ಬಾಕ್ಸ್ ಗೋಡೌನ್ ಮಧ್ಯದ ಖಾಲಿ ಜಾಗದಲ್ಲಿ ಮಲಗುತ್ತಿದ್ದರು. ಸೆಪ್ಟೆಂಬರ್ 28ರ ಸಂಜೆ 7:00 ಗಂಟೆಯಿಂದ ಸೆಪ್ಟೆಂಬರ್ 29ರ ಬೆಳಿಗ್ಗೆ 8:30 ಗಂಟೆಯ ಮಧ್ಯಾವಧಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರ ಕುತ್ತಿಗೆಗೆ ಮಾರಕ ಆಯುಧದಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಬೆಳಿಗ್ಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ಕಂಡ ಸ್ಥಳೀಯ ಏಜೆನ್ಸಿ ಮಾಲೀಕರಾದ ರಿಶಬ್ ನೀಡಿದ ದೂರಿನಂತೆ, ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 103 BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


