ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮೂಲದವರ ಪೈಕಿ 13 ಮಂದಿಗೆ ಕೋವಿಡ್ 19 ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ರಾಜ್ಯದಿಂದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಗೆ ಪಾಲ್ಗೊಳ್ಳಲು ತೆರಳಿದ್ದವರ ಪೈಕಿ 13 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಈ ವರೆಗೂ ಸಭೆಗೆ ಹಾಜರಾಗಿದ್ದ 187 ಮಂದಿಯ ವೈದ್ಯಕೀಯ ತಪಾಸಣೆ ವರದಿ ನೆಗೆಟಿವ್ ಬಂದಿದೆ. ಇನ್ನೂ 88 ಮಂದಿಯ ವರದಿ ಬಂದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆ
ಇನ್ನು ಇಂದು ರಾಜ್ಯದಲ್ಲಿ ಮತ್ತೆ ಹಲವು ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಬಾಗಲಕೋಟೆಯಲ್ಲಿ ಒಬ್ಬರು ಮತ್ತು ಬೆಳಗಾವಿಯಲ್ಲಿ ಮೂವರಲ್ಲಿ ಇಂದು ವೈರಸ್ ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಳಗಾವಿಯಲ್ಲಿ ಪತ್ತೆಯಾಗಿರುವ ಮೂರು ಪ್ರಕರಣಗಳಿಗೂ ದೆಹಲಿ ಮಸೀದಿ ಧಾರ್ಮಿಕ ಸಭೆಯ ನಂಟಿದೆ. ಈ ಮೂವರೂ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.