ಬೆಂಗಳೂರು; ಖ್ಯಾತ ರಂಗಕರ್ಮಿ, ಹಿರಿತೆರೆ, ಕಿರುತೆರೆ ನಟ ಯಶವಂತ ಸರ ದೇಶಪಾಂಡೆ ನಿಧನರಾಗಿದ್ದಾರೆ.
ಹಾಸ್ಯನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ಸಂಭಾಷಣಾಕಾರರಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಹೃದಯಾಘಾತದಿಂದ ನಿದನರಾಗಿದ್ದಾರೆ. ಯಶವಂತ ಸರ ದೇಶಪಾಂಡೆ ಅವರ ಪತ್ನಿ ಮಾಲತಿ ಸರ ದೇಶಪಾಂಡೆ ಕೂಡ ಖ್ಯಾತ ಕಿರುತೆರೆ ನಟಿಯಾಗಿದ್ದಾರೆ. ಕನ್ನಡದ ರಿಯಾಲಿಟಿ ಶೋ ಜೋಡಿ ನಂ.1ನಲ್ಲಿ ಭಾಗವಹಿಸಿದ್ದರು. ಯಶವಂತ ಸರ ದೇಶಪಾಂಡೆ ಪತ್ನಿ ನಟಿ ಮಾಲತಿ, ಮಗಳು ದೋಸ್ತಿಯನ್ನು ಅಗಲಿದ್ದಾರೆ.
ರಂಗಭೂಮಿಯ ಜೊತೆಗೆ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಯದ್ವಾ ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳಲ್ಲಿ ನಟಿಸಿದ್ದು, ಕೆಲವು ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಚಲನಚಿತ್ರಗಳಲ್ಲಿಯೂ ತಮ್ಮ ಕಲೆ ಪ್ರದರ್ಶಿಸಿರುವ ಅವರು ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶ್ಯಾಮಭಾಮ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


