ಬೆಂಗಳೂರು : ಕರ್ನಾಟಕದಲ್ಲಿ ಒಂದು ವರ್ಷ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ‘ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ 2020’ ಹೆಸರಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಈ ಆದೇಶ ಪ್ರಕಟವಾದ ದಿನದಿಂದ ಒಂದು ವರ್ಷದವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ.
ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೇ ಇದ್ದಲ್ಲಿ ಕರವಸ್ತ್ರ, ಅಥವಾ ಬಾಯಿ ಮತ್ತು ಮೂಗನ್ನು ಬಿಗಿಯಾಗಿಲ್ಲದ ಬಟ್ಟೆಯಿಂದ ಮುಚ್ಚಬೇಕು. ಇಬ್ಬರ ವ್ಯಕ್ತಿಗಳ ನಡುವೆ ಕನಿಷ್ಠ 1 ಮೀಟರ್ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಾಸ್ಕ್ ಧರಿಸದಿದ್ದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 200 ರೂ., ಮಹಾನಗರ ವ್ಯಾಪ್ತಿಯಲ್ಲದ ಪ್ರದೇಶಗಳಲ್ಲಿ 100 ರೂ. ದಂಡವನ್ನು ವಿಧಿಸಲಾಗುತ್ತದೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಮಹಾನಗರ ಪಾಲಿಕೆಯ ಆರೋಗ್ಯ ಇನ್ಸ್ ಪೆಕ್ಟರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಸರ್ಕಾರದ ಯಾವುದೇ ಅಧಿಕಾರಿಗೆ ದಂಡ ವಿಧಿಸುವ ಅಧಿಕಾರವನ್ನು ಸುಗ್ರೀವಾಜ್ಞೆಯಲ್ಲಿ ನೀಡಲಾಗಿದೆ.