Tuesday, June 23, 2026
Homeಕರಾವಳಿಖಾಸಗಿ ವಾಹಿನಿಯೊಂದರ ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚಾರ; ನಟಿಗೆ ದಂಡ!

ಖಾಸಗಿ ವಾಹಿನಿಯೊಂದರ ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚಾರ; ನಟಿಗೆ ದಂಡ!

- Advertisement -
- Advertisement -

ಮಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಸೀತಾರಾಮ’ ಹೆಸರಿನ ಧಾರಾವಾಹಿಯ 14ನೇ ಸಂಚಿಕೆಯ ದೃಶ್ಯದಲ್ಲಿ ನಟಿಯೊಬ್ಬರು ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ್ದಕ್ಕಾಗಿ ಪೊಲೀಸರು “ದಂಡ’ ವಿಧಿಸಿದ್ದಾರೆ.

ಮಂಗಳೂರಿನ ಜಯಪ್ರಕಾಶ್‌ ಎಕ್ಕೂರು ಎಂಬವರು ಟಿವಿಯಲ್ಲಿ ಪ್ರಸಾರವಾದ ಈ ದೃಶ್ಯವನ್ನು ವೀಕ್ಷಿಸಿ, ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿ, ಧಾರಾವಾಹಿಯಲ್ಲಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ನಟ-ನಟಿಯರು ಸಂಚಾರ ನಿಯಮ ಉಲ್ಲಂಘಿಸುವುದು ಪ್ರೇಕ್ಷಕರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ಆ ನಟಿ, ಧಾರಾವಾಹಿಯ ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದರು.

ಈ ಪ್ರಕರಣವನ್ನು ಮಂಗಳೂರು ಸಂಚಾರ ಪೂರ್ವ ಠಾಣೆಗೆ ಪೊಲೀಸ್‌ ಆಯುಕ್ತರು ವಹಿಸಿದ್ದರು. ಅದರಂತೆಯೇ ಜಯಪ್ರಕಾಶ್‌ ಅವರಿಗೆ ಠಾಣೆಯಿಂದ ಹಿಂಬರಹ ನೀಡಿ, ದ್ವಿಚಕ್ರ ವಾಹನದ ಮಾಲಕರಿಗೆ ಮತ್ತು ಧಾರಾವಾಹಿಯ ನಿರ್ದೇಶಕರಿಗೆ ಮಾಹಿತಿ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿತ್ತು. ಧಾರಾವಾಹಿಯ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಿತ್ರೀಕರಿಸಿದ್ದು, ಮುಂದಿನ ವಿಚಾರಣೆಗೆ ಅಲ್ಲಿನ ಪೊಲೀಸ್‌ ಠಾಣೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿತ್ತು. ಅರ್ಜಿಯ ಬಗ್ಗೆ ಪರಿಶೀಲನೆ ನಡೆಸಿದ ರಾಜಾಜಿನಗರ ಠಾಣಾ ಪೊಲೀಸರು ಸಂಬಂಧಪಟ್ಟ ನಟಿಗೆ ಮತ್ತು ಮಾಲಕಿಗೆ ಮೇ 10ರಂದು 500 ರೂ. ದಂಡ ವಿಧಿಸಿದ್ದಾರೆ. ಮಾತ್ರವಲ್ಲದೆ, ಇನ್ನು ಮುಂದೆ ತಮ್ಮ ಧಾರಾವಾಹಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸುವುದಿಲ್ಲ ಎಂದು ಧಾರಾವಾಹಿಯ ಪ್ರೊಡಕ್ಷನ್‌ ಮ್ಯಾನೇಜರ್‌ ರಿಂದ ಹಿಂಬರಹ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!