Monday, April 29, 2024
Homeಕರಾವಳಿತ್ಯಾಜ್ಯದಿಂದ ಗಬ್ಬೆದ್ದು ನಾರುತ್ತಿದೆ ಉಳ್ಳಾಲ;  ರೋಗ ಹರಡುವ ಭೀತಿಯಲ್ಲಿ ಜನ

ತ್ಯಾಜ್ಯದಿಂದ ಗಬ್ಬೆದ್ದು ನಾರುತ್ತಿದೆ ಉಳ್ಳಾಲ;  ರೋಗ ಹರಡುವ ಭೀತಿಯಲ್ಲಿ ಜನ

spot_img
- Advertisement -
- Advertisement -

ಮಂಗಳೂರು: ಸ್ವಚ್ಛ ಭಾರತ ನಿರ್ಮಾಣ ಆಗಬೇಕೆನ್ನುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಶಯ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕ್ಷೇತ್ರ ಮಾತ್ರ ಕಸದಿಂದಲೇ ಆವೃತವಾಗಿದೆ.


ಮಂಗಳೂರು ವಿಧಾನಸಭಾ ಕ್ಷೇತ್ರ ಅಂತಾನೇ ಕರೆಸಿಕೊಳ್ಳುವ ಉಳ್ಳಾಲದ ಎಲ್ಲಾ ರಸ್ತೆಗಳು ಕಸದ ರಾಶಿಯಿಂದ ತುಂಬಿದೆ. ರಸ್ತೆಗಳೆಲ್ಲಾ ಗಬ್ಬೆದ್ದು ನಾರುತ್ತಿದ್ದು, ಜನ ತಮ್ಮ ಸ್ವಯಂಕೃತ ಅಪರಾಧದಿಂದ ಮೂಗು ಮುಚ್ಚಿ ರಸ್ತೆ ಸಂಚಾರ ಮಾಡುವಂತಾಗಿದೆ.


ಬಯಲು ಶೌಚಾಲಯ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಯಲು ಶೌಚಾಲಯ ಶೂನ್ಯ ಪ್ರಮಾಣದಲ್ಲಿದ್ದರೂ, ಸ್ವಚ್ಛತೆ ಮಾತ್ರ ಕಣ್ಮರೆಯಾಗಿದೆ. ಪ್ರತಿ ಗ್ರಾಮ ಪಂಚಾಯತ್‌ಗಳು ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕಸಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಕೇಂದ್ರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುದಾನಗಳನ್ನೂ ನೀಡಲಾಗುತ್ತಿದೆ. ಆದರೆ ಸುಶಿಕ್ಷಿತರೇ ಇರುವ ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಕೇಂದ್ರ ಸರಕಾರದ ಸ್ವಚ್ಛ ಭಾರತ್ ಪರಿಕಲ್ಪನೆಗೆ ಅಸ್ವಚ್ಛತೆಯ ನಿರಾಶಾದಾಯಕ ಉತ್ತರ ನೀಡಿದೆ.


ಅದರಲ್ಲೂ ರಾಜ್ಯದ ಮಾಜಿ ಆರೋಗ್ಯ ಸಚಿವ ಯು.ಟಿ. ಖಾದರ್ ಕ್ಷೇತ್ರದಲ್ಲಿ ಮಾತ್ರ ಕಸದ್ದೇ ಸಾಮ್ರಾಜ್ಯವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಕೊಣಾಜೆ, ಕಿನ್ಯಾ, ತಲಪಾಡಿ, ಉಳ್ಳಾಲ, ದೇರಳಕಟ್ಟೆ ಮೊದಲಾದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ಕಸಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಪರಿಸರ ಹೋರಾಟಗಾರರು ಹಲವು ಬಾರಿ ತಂದರೂ, ಈ ಬಗ್ಗೆ ಯಾವದೇ ಕ್ರಮ ಕೈಗೊಳ್ಳಲಾಗಿಲ್ಲ. ಪ್ಲಾಸ್ಟಿಕ್ ಕಸಗಳನ್ನು ಕಡ್ಡಾಯವಾಗಿ ಕಸ ವಿಲೇವಾರಿ ಘಟಕಕ್ಕೆ ಸಾಗಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ನಡುವೆಯೇ ಪ್ಲಾಸ್ಟಿಕ್ ಕಸಗಳನ್ನು ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಉರಿಸಲಾಗುತ್ತಿದೆ.


ಪ್ಲಾಸ್ಟಿಕ್ ಉರಿಸುವುದರಿಂದ ಹೊರಸೂಸುವ ಹೊಗೆ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಉರಿಸುವುದನ್ನು ನಿಷೇಧ ಮಾಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಉರಿಸುವುದು ಇದೀಗ ಸಾಮಾನ್ಯವಾಗಿದೆ. ಪ್ಲಾಸ್ಟಿಕ್‌ನಿಂದ ಹೊರ ಹೊಮ್ಮುವ ಹೊಗೆ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೂ ಕಾರಣವಾಗುತ್ತಿದ್ದು, ಸ್ಥಳೀಯಾಡಳಿತಗಳು ಈ ಬಗ್ಗೆ ಗಮನಹರಿಸಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ. ಇನ್ನೊಂದೆಡೆ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕಾದ ಗ್ರಾಮ ಪಂಚಾಯತ್‌ಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಜನ ರಸ್ತೆ ಬದಿಯಲ್ಲೇ ಕಸ ಎಸೆಯುತ್ತಾರೆ.


ಉಳ್ಳಾಲದಲ್ಲಿ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಜನ ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಎಸೆಯುತ್ತಾರೆ ಅನ್ನುವುದು ಹಲವು ವರ್ಷಗಳಿಂದ ಇರುವ ಸಮಸ್ಯೆಯಾಗಿದೆ. ಆದರೆ ತ್ಯಾಜ್ಯ ವಿಲೇವಾರಿ ಬಗ್ಗೆ ಸ್ಥಳೀಯಾಡಳಿತ ಮತ್ತು ಶಾಸಕ ಯು.ಟಿ. ಖಾದರ್ ಇನ್ನೂ ಗಮನಹರಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ನಗರಸಭೆಗೆ ಒಳಪಟ್ಟ ರಸ್ತೆಗಳಲ್ಲಿ ತ್ಯಾಜ್ಯಗಳು ಕೊಳೆತು ನಾರುತ್ತಿದೆ. ಇದರಿಂದ ಜಾನುವಾರುಗಳಿಗೆ ಆರೋಗ್ಯ ತೊಂದರೆ, ಜನರಿಗೆ ಸಾಂಕ್ರಾಮಿಕ ರೋಗ ಉಂಟಾಗುವ ಆತಂಕ ಎದುರಾಗಿದೆ. ಅಂತರ್ಜಲವೂ ಕಲುಷಿತಗೊಳ್ಳುತ್ತಿರುವುದರಿಂದ, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.


ಪ್ಲಾಸ್ಟಿಕ್ ಕಸವನ್ನು ಸುಡುವುದರಿಂದ ಮನುಷ್ಯನ ಆರೋಗ್ಯದ ಜೊತೆಗೆ ವಾತಾವರಣದ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಸ್ವಚ್ಛತೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರೆ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅಸ್ವಚ್ಛತೆಯ ಮೂಲಕ ಈ ಕಾರ್ಯಕ್ರಮಗಳಿಗೆ ಸಡ್ಡು ಹೊಡೆಯುತ್ತಿದೆ.

- Advertisement -
spot_img

Latest News

error: Content is protected !!