ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಮಹಾತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮಹಾರುದ್ರಯಾಗದ ವೇಳೆ ಪೌರೋಹಿತ್ಯಕ್ಕೆ ಸಂಬಂಧಿಸಿದ ಮೇಲ್ವಿಚಾರಣೆ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಕೊಡವೂರು ಗ್ರಾಮದ ನಿವಾಸಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಜಿ ಅವರು ನೀಡಿದ ದೂರಿನ ಪ್ರಕಾರ, ವೆಂಕಟಕೃಷ್ಣ (49) ನಾಪತ್ತೆಯಾದವರು.
ಜೂನ್ 12ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಕೊಡವೂರು ಗ್ರಾಮದ ಕೆರೆಕಟ್ಟೆ ಗಣಪತಿ ದೇವಸ್ಥಾನದಿಂದ ತೆರಳಿದ್ದು, ಬಳಿಕ ದೇವಸ್ಥಾನಕ್ಕೂ ಮರಳದೆ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಮಹಾರುದ್ರಯಾಗದ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವೆಂಕಟಕೃಷ್ಣ ಅವರಿಗಾಗಿ ಸಂಬಂಧಿಕರು ಹಾಗೂ ಪರಿಚಯಸ್ಥರ ಬಳಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2026ರಡಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ವೆಂಕಟಕೃಷ್ಣ ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ


