ಕಾರ್ಕಳ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಬಾವಿಯೊಳಗೆ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ಕಾರ್ಕಳದ ಬೈಪಾಸ್ ಬಳಿ ಸೋಮವಾರ (ಜೂ.15) ಬೆಳಗ್ಗೆ ನಡೆದಿದೆ.ಬೈಪಾಸ್ ರಸ್ತೆಯ ನಿವಾಸಿ ನಾರಾಯಣ ಭಟ್ (48) ರಕ್ಷಿಸಲ್ಪ ವ್ಯಕ್ತಿ.
ಸೋಮವಾರ ಬೆಳಗ್ಗೆ ಸುಮಾರು 7ರ ಸುಮಾರಿಗೆ ನಾರಾಯಣ ಭಟ್ ಅವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಇದನ್ನು ಗಮನಿಸಿದ ನಾರಾಯಣ ಭಟ್ ಅವರು ಬೆಕ್ಕನ್ನು ಮೇಲಕ್ಕೆತ್ತಲು ಸ್ವತಃ ಬಾವಿಗೆ ಇಳಿದಿದ್ದಾರೆ. ಆದರೆ ಬೆಕ್ಕನ್ನು ಹಿಡಿದ ನಂತರ ಅವರಿಗೆ ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಒಳಗೆ ಸಿಕ್ಕಿ ಹಾಕಿಕೊಂಡಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಕಳ ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿತು. ಸಿಬ್ಬಂದಿ ರೂಪೇಶ್ ಅವರು ಬಾವಿಗಿಳಿದು ಜಾಗರೂಕತೆಯಿಂದ ನಾರಾಯಣ ಭಟ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಇದೇ ವೇಳೆ ಬಾವಿಗೆ ಬಿದ್ದಿದ್ದ ಬೆಕ್ಕನ್ನೂ ಸಜೀವವಾಗಿ ರಕ್ಷಿಸಲಾಯಿತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬಂದಿ ಭೀಮಪ್ಪ, ಗಣೇಶ್, ಸುರೇಶ್ ಹಾಗೂ ಚಾಲಕ ಮುಜಾಮೀ ಸಹಕರಿಸಿದರು.


