Thursday, July 23, 2026
Homeಕರಾವಳಿಉಡುಪಿಉಡುಪಿ: ಪೆಟ್ರೋಲ್ ಹಾಕಿಸಿ ದುಡ್ಡು ಕೊಡದೆ ವಂಚಿಸಿ ಪರಾರಿಯಾಗಿದ್ದ ಮೂವರ ಬಂಧನ

ಉಡುಪಿ: ಪೆಟ್ರೋಲ್ ಹಾಕಿಸಿ ದುಡ್ಡು ಕೊಡದೆ ವಂಚಿಸಿ ಪರಾರಿಯಾಗಿದ್ದ ಮೂವರ ಬಂಧನ

- Advertisement -
- Advertisement -

ಉಡುಪಿ:: ಪೆಟ್ರೋಲ್ ಬಂಕ್ ಒಂದರಲ್ಲಿ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ನಟಿಸಿ ಹಣ ಪಾವತಿಸದೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಶಿರ್ವ ಕೋಟೆಕಾರ್ ನಿವಾಸಿ ಮಹಮ್ಮದ್ ರಿಯಾಜ್ (26), ಭೂತಬೆಟ್ಟು ನಿವಾಸಿ ಮಹಮ್ಮದ್ ಅಫ್ರಾಜ್ (23) ಹಾಗೂ ಉಡುಪಿ ಅಂಬಾಗಿಲಿನ ಆಶಿಲ್ (21) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಜೂನ್ 27ರ ರಾತ್ರಿ ಕುರ್ಕಾಲು ಗ್ರಾಮದ ಸುಭಾಸ್ ನಗರದಲ್ಲಿರುವ ಪೆಟ್ರೋಲ್ ಬಂಕ್‌ಗೆ ಕಾರಿನಲ್ಲಿ ಬಂದಿದ್ದ ಆರೋಪಿಗಳು, ₹4,711 ಮೌಲ್ಯದ ಡೀಸೆಲ್ ತುಂಬಿಸಿಕೊಂಡಿದ್ದರು. ಬಳಿಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ನೆಪದಲ್ಲಿ, “ಮೊದಲು ಬಿಲ್ ಕೊಡಿ, ನೋಡಿ ಹಣ ಹಾಕುತ್ತೇವೆ” ಎಂದು ಬಂಕ್ ಸಿಬ್ಬಂದಿ ಶಶಾಂಕ್ ಅವರನ್ನು ನಂಬಿಸಿದ್ದರು. ಸಿಬ್ಬಂದಿ ಬಿಲ್ ತೆಗೆಯುವಷ್ಟರಲ್ಲಿ ಆರೋಪಿಗಳು ಕಾರನ್ನು ತೀವ್ರ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದರು.

ಈ ಕುರಿತು ಶಿರ್ವ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ಹಾಗೂ ಕಾಪು ಸಿಐ ಅಝಮತ್ ಆಲಿ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಶಿರ್ವ ಪಿಎಸ್‌ಐಗಳಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಮತ್ತು ತಂಡವು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಬೆಂಗಳೂರಿನಲ್ಲಿ ಅಡಗಿದ್ದ ಆರೋಪಿಗಳನ್ನು ಕಾರು ಸಮೇತ ಹೆಡೆಮುರಿ ಕಟ್ಟಿದೆ. ಆರೋಪಿಗಳು ಇದೇ ರೀತಿ ಬೇರೆಲ್ಲೂ ವಂಚನೆ ಎಸಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!