
ಕುಂದಾಪುರ: ಇಲ್ಲಿನ ಪಂಚಗಂಗಾವಳಿ ನದಿ ಪಾತ್ರದಲ್ಲಿ ಕಳೆದ ಒಂದು ವಾರದಿಂದ ವಿಷಕಾರಿ ರಾಸಾಯನಿಕ ಪದಾರ್ಥಗಳು ಕಂಡುಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಸಂಗಮ್ ತಟದ ಬಳಿ ನದಿಯ ನೀರು ಕಲುಷಿತಗೊಂಡಿರುವುದು ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ.
ಸ್ಥಳೀಯರ ಪ್ರಕಾರ, ಸಮೀಪದ ಹೋಟೆಲ್ಗಳು ಹಾಗೂ ಆಸ್ಪತ್ರೆಗಳಿಂದ ಹೊರಬಿಡುವ ತ್ಯಾಜ್ಯ ನೀರು ಡ್ರೈನೇಜ್ ಪೈಪ್ ಮೂಲಕ ನದಿಗೆ ಸೇರುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ರಿಂಗ್ ರೋಡ್ ನಿರ್ಮಾಣದ ವೇಳೆ ತ್ಯಾಜ್ಯ ನೀರು ಹರಿಯುವ ಪೈಪ್ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದ್ದರೂ, ಈಗಲೂ ಕಲುಷಿತ ನೀರು ನದಿಗೆ ಹರಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಾಸಾಯನಿಕಯುಕ್ತ ತ್ಯಾಜ್ಯ ನೀರು ನದಿಗೆ ಸೇರುತ್ತಿರುವುದರಿಂದ ಜಲಚರಗಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. ನದಿಯ ಪರಿಸರ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುವ ಆತಂಕವಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನದಿಯ ನೀರಿನ ಗುಣಮಟ್ಟ ಪರಿಶೀಲಿಸಿ, ಮಾಲಿನ್ಯದ ಮೂಲ ಪತ್ತೆಹಚ್ಚಬೇಕು. ನದಿಗೆ ತ್ಯಾಜ್ಯ ನೀರು ಬಿಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


