Thursday, November 26, 2026
Homeಅಪರಾಧಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ; ಹೊರಗುತ್ತಿಗೆ ಸಿಬ್ಬಂದಿ ಸೇರಿ ಮೂವರ ಬಂಧನ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ; ಹೊರಗುತ್ತಿಗೆ ಸಿಬ್ಬಂದಿ ಸೇರಿ ಮೂವರ ಬಂಧನ

- Advertisement -
- Advertisement -

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆಗೆ ಸಹಕರಿಸಿದ ಆರೋಪದ ಮೇಲೆ ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಮೂವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ವಿಮಾನ ನಿಲ್ದಾಣದ ಸಿಬ್ಬಂದಿ ದುಬೈ ಮತ್ತು ಕಾಸರಗೋಡು ಮೂಲದ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿ ಚಿನ್ನ ಸಾಗಣೆಗೆ ಸಹಕರಿಸುತ್ತಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಯುಎಇಯಿಂದ ಬರುವ ಪ್ರಯಾಣಿಕರು ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಲ್ಲಿ ಬಚ್ಚಿಟ್ಟು ಹೋಗುತ್ತಿದ್ದ ಚಿನ್ನವನ್ನು ಸಿಬ್ಬಂದಿ ಹೊರತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಈ ಮಾಹಿತಿಯ ಆಧಾರದ ಅಧಿಕಾರಿಗಳು ವಿಮಾನ ನಿಲ್ದಾಣದ ಆಗಮನ ವಿಭಾಗದಲ್ಲಿ ರಹಸ್ಯ ನಿಗಾ ಇರಿಸಿದ್ದರು. ಈ ವೇಳೆ ಶೌಚಾಲಯದಿಂದ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಹೊರಗುತ್ತಿಗೆ ಸಿಬ್ಬಂದಿಯನ್ನು ವಶಕ್ಕೆ ಪಡೆದು ಚಿನ್ನವನ್ನು ಜಪ್ತಿ ಮಾಡಿದರು.

ಆರೋಪಿ ಚಿನ್ನವನ್ನು ಕಾಸರಗೋಡು ಮೂಲದ ಮತ್ತೊಬ್ಬ ಸಿಬ್ಬಂದಿಗೆ ನೀಡಲು ಯೋಜಿಸಿದ್ದ. ಬಳಿಕ ಆ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಮತ್ತೊಬ್ಬ ವ್ಯಕ್ತಿಗೆ ಚಿನ್ನ ಹಸ್ತಾಂತರಿಸಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಬಳಿಕ ಅಧಿಕಾರಿಗಳು ಉಳಿದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಸುಮಾರು 73 ಲಕ್ಷ ರೂ. ನಗದು ಪತ್ತೆಯಾಗಿದೆ. ಒಟ್ಟು 2 ಕೋಟಿ ರೂ. ಮೌಲ್ಯದ 1.65 ಕೆ.ಜಿ. ವಿದೇಶಿ ಮೂಲದ ಚಿನ್ನ, 73 ಲಕ್ಷ ರೂ. ನಗದು, ಕಳ್ಳಸಾಗಣೆಗೆ ಬಳಸಿದ್ದ ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಮೂವರು ಆರೋಪಿಗಳನ್ನು ಕಸ್ಟಮ್ಸ್ ಕಾಯ್ದೆ 1962ರ ಅಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!