
ಬೆಳ್ತಂಗಡಿ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ನವೆಂಬರ್ 23ರಂದು ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಬಾಲಕೃಷ್ಣ ಎ. ಅವರು ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದ ವೇಳೆ, ಮುಂಡಾಜೆ ಗ್ರಾಮದ ಕೊಡಂಗೆ ಎಂಬಲ್ಲಿ ಮೃತ್ಯುಂಜಯ ಹೊಳೆಯಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಬೀಟ್ ಪೊಲೀಸರಿಂದ ಖಚಿತ ಮಾಹಿತಿ ಲಭಿಸಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾತ್ರಿ 10.40ರ ಸುಮಾರಿಗೆ ಕೊಡಂಗೆಯ ಮಣ್ಣು ರಸ್ತೆಯಲ್ಲಿ ಬರುತ್ತಿದ್ದ ಇಚರ್ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಚಾರ್ಮಾಡಿ ಗ್ರಾಮದ ನಿವಾಸಿ, ಚಾಲಕ ಮಹಮ್ಮದ್ ನಿಶಾದ್ (25) ಯಾವುದೇ ಪರವಾನಿಗೆ ಪಡೆಯದೆ ಹಾಗೂ ಸರ್ಕಾರಕ್ಕೆ ರಾಜಸ್ವ ಪಾವತಿಸದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ದೃಢಪಟ್ಟಿದೆ.
ಪೊಲೀಸರು ₹5 ಲಕ್ಷ ಮೌಲ್ಯದ ಟಿಪ್ಪರ್ ಲಾರಿ ಹಾಗೂ ಅದರಲ್ಲಿದ್ದ ₹10 ಸಾವಿರ ಮೌಲ್ಯದ 2.2 ಬ್ರಾಸ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


