
ಮಂಗಳೂರು: ಪಾರ್ಟ್‌ಟೈಮ್ ಉದ್ಯೋಗ ಹಾಗೂ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಗೆ 1.43 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
44 ವರ್ಷದ ಮಹಿಳೆಯೊಬ್ಬರು ನ.15ರಂದು ಸಾಮಾಜಿಕ ಜಾಲತಾಣದಲ್ಲಿ ಪಾರ್ಟ್‌ಟೈಮ್ ಉದ್ಯೋಗದ ಜಾಹೀರಾತು ನೋಡಿದ್ದರು. ಅದರ ಲಿಂಕ್ ಕ್ಲಿಕ್ ಮಾಡಿದಾಗ ಅಪರಿಚಿತರು ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿ ಕೆಲಸದ ಬಗ್ಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಗೂಗಲ್‌ನಲ್ಲಿರುವ ವಿವಿಧ ಲಿಂಕ್‌ಗಳಿಗೆ ರಿವ್ಯೂ ನೀಡುವ ಕೆಲಸ ನೀಡಲಾಗಿತ್ತು. ಇದನ್ನು ಪೂರ್ಣಗೊಳಿಸಿದ ಮಹಿಳೆಗೆ 180 ರೂ. ನೀಡಲಾಗಿತ್ತು.
ನಂತರ ಮಹಿಳೆಯನ್ನು ಟೆಲಿಗ್ರಾಂನ ‘ಮೆಗಾ ಟಾಸ್ಕ್ ಗ್ರೂಪ್’ಗೆ ಸೇರಿಸಿ, ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಗ್ಯಾರಂಟಿ ಒಪ್ಪಂದದ ಪತ್ರವನ್ನೂ ಕಳುಹಿಸಿದ್ದರು.
ಇದನ್ನು ನಂಬಿದ ಮಹಿಳೆ ನ.17 ಮತ್ತು 18ರಂದು ಪೇಟಿಎಂ ಮೂಲಕ ವಿವಿಧ ಯುಪಿಐ ಐಡಿ ಹಾಗೂ ಬ್ಯಾಂಕ್ ಖಾತೆಗಳಿಗೆ ಒಟ್ಟು 1.43 ಲಕ್ಷ ರೂ. ವರ್ಗಾಯಿಸಿದ್ದರು. ಆದರೆ, ಹಣವಾಗಲಿ, ಲಾಭಾಂಶವಾಗಲಿ ಹಿಂದಿರುಗಿಸದೆ ಅಪರಿಚಿತರು ವಂಚಿಸಿದ್ದಾರೆ.
ಈ ಬಗ್ಗೆ ಮಹಿಳೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


