ಉಡುಪಿ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಗಳನ್ನು ಕೇವಲ 12 ಗಂಟೆಗಳಲ್ಲಿ ಪೊಲೀಸರು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ 80 ಬಡಗುಬೆಟ್ಟು ಗ್ರಾಮದ ಶಾಂತಿನಗರದಲ್ಲಿ ಕಳ್ಳರು ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದಿದ್ದರು. ಈ ಪ್ರಕರಣದ ಬೇಧಿಸಿದ ಮಣಿಪಾಲ ಪೊಲೀಸರು ಕೇವಲ 12 ಗಂಟೆಗಳೊಳಗೆ ನಾಲ್ವರನ್ನು ಬಂಧಿಸಿದ್ದಾರೆ. ವಿಜಯಪುರ ಮೂಲದ, ಉಡುಪಿ ಪುತ್ತೂರು ಹನುಮಂತನಗರ ನಿವಾಸಿ ಸಂತೋಷ ಯಾನೆ ಸಂತೋಷ ಪೊಲೆಷಿ (20), ಕೊಡವೂರು ಗ್ರಾಮದ ಕಲ್ಮಾಡಿ ನಿವಾಸಿ ಚಿರಂತನ್ (21) ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಇಬ್ಬರು ಬಾಲಕರು ಬಂಧಿತರು.
ಶಾಂತಿನಗರದ ಸಂಗೀತ ಮಡಿವಾಳ ಅವರ ಮನೆಗೆ ಮಾ.13 ರಂದು ಬೆಳಗ್ಗೆ ಹೆಂಚು ತೆಗೆದು ಒಳನುಗ್ಗಿದ ಆರೋಪಿಗಳು, ಕಪಾಟಿನಲ್ಲಿ ಇರಿಸಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಕಳವುಗೈದಿದ್ದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ವಿಶೇಷ ಪೊಲೀಸ್ ತಂಡ ಮಾ.13ರಂದು ಮಣಿಪಾಲದ ಸಿಂಬ್ರಾ ಸೇತುವೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಯುವಕರು ಹಾಗೂ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಶಾಂತಿನಗರದಲ್ಲಿ ನಡೆದ ಕಳ್ಳತನದಲ್ಲಿ ತಾವು ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಉಪಕರಣಗಳ ಜೊತೆಗೆ ಸುಮಾರು 4,47,೦೦೦ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಹೆಚ್ಚುವರಿ ಎಸ್ಪಿ ಸುಧಾಕರ ಎಸ್. ನಾಯ್ಕ ಮಾರ್ಗದರ್ಶನದಲ್ಲಿ, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ. ಅವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಎಸ್ಐ ತಿಮ್ಮೇಶ್ ಬಿ.ಎನ್., ಸಿಬ್ಬಂದಿಗಳಾದ ವಿಶ್ವಜಿತ್ ಬೆಳ್ಳೆ, ಮಹಮ್ಮದ್ ಅಜ್ವಲ್ ಹೈಕಾಡಿ, ಚೇತನ್, ರವಿರಾಜ್, ಠಾಣಾ ತನಿಖಾ ಸಹಾಯಕರು ಸುರೇಶ್ ಶೆಟ್ಟಿ, ಸುಕುಮಾರ ಶೆಟ್ಟಿ, ಜೀಪು ಚಾಲಕರು ಸಲೀಂ, ಸತೀಶ ಹಾಗೂ ಉಡುಪಿ ಸಿಡಿಆರ್ ವಿಭಾಗದ ದಿನೇಶ್ ಮತ್ತು ನಿತೀನ್ ಭಾಗವಹಿಸಿದ್ದರು.


