ಸುಬ್ರಹ್ಮಣ್ಯ; ಕೊಲ್ಲಮೊಗ್ರದಲ್ಲಿ ಚಹಾ ಮಾಡುತ್ತಿದ್ದಾಗ ಬೆಂಕಿ ತಾಗಿ ಮಹಿಳೆಗೆ ಗಂಭೀರ ಗಾಯಗಳಾಗಿ ಮಗನಿಗೂ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.
ಕೊಲ್ಲಮೊಗ್ರು ಗ್ರಾಮದ ಶಿರೂರು ಬಳಿಯ ಸುಬ್ರಹ್ಮಣ್ಯ ಬೊಳಿಯಾನ ಅವರ ಮನೆಯಲ್ಲಿ ಅವರ ತಾಯಿ ತಿಲಕ ಅವರು ಬೆಳಗ್ಗೆ ಚಹಾ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ತಗುಲಿದೆ. ಕ್ಷಣಾರ್ಧದಲ್ಲಿ ಬೆಂಕಿ ಮೈತುಂಬಾ ವ್ಯಾಪಿಸಿದ್ದು, ಗಾಬರಿಗೊಂಡ ತಿಲಕ ಅವರು ಜೋರಾಗಿ ಕಿರುಚಾಡಿದ್ದಾರೆ.
ತಾಯಿಯ ಬೊಬ್ಬೆ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿದ ಮಗ ಸುಬ್ರಹ್ಮಣ್ಯ ಅವರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಪ್ರಯತ್ನದಲ್ಲಿ ಸುಬ್ರಹ್ಮಣ್ಯ ಅವರ ಕೈಗಳಿಗೂ ಅಲ್ಪಸ್ವಲ್ಪ ಸುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಿಲಕ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.


