ಉಡುಪಿ:: ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಶೀಟರ್ ಗಣೇಶ್ ಪೂಜಾರಿ ಬಂಧಿಸಿ ಕಲಬುರ್ಗಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಎಪ್ರಿಲ್ 4ರಂದು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ರೌಡಿ ಶೀಟರ್, ಕೌಡೂರು ಗ್ರಾಮದ ಗಣೇಶ್ ಪೂಜಾರಿ (48) ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಒಟ್ಟು 11 ಗಂಭೀರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 4 ಕೊಲೆಯತ್ನ, ಒಂದು ದರೋಡೆ, ಮೂರು ಹಲ್ಲೆ ಸೇರಿದಂತೆ ಜೂಜಾಟ ಮತ್ತು ಅಕ್ರಮ ಕೂಟದಂತಹ ಪ್ರಕರಣಗಳು ಸೇರಿವೆ. ಈ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಎರಡು ಪ್ರಕರಣಗಳು ಸದ್ಯ ತನಿಖಾ ಹಂತದಲ್ಲಿವೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರು ನೀಡಿದ ವರದಿಯನ್ನು ಆಧರಿಸಿ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲು ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆರೋಪಿಯನ್ನು ಕಲಬುರ್ಗಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ.


