
ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಶೂಟೌಟ್ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಸುಫಾರಿ ಕಿಲ್ಲರ್‌ಗಳಿಗೆ ಹಣಕಾಸಿನ ನೆರವು ನೀಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಬಡಾ ಎರ್ಮಾಳಿನ ಸದಾನಂದ ದೇವಾಡಿಗ (41) ಹಾಗೂ ಉಚ್ಚಿಲದ ಕಿಶೋರ್ ರಾಮ ಪೂಜಾರಿ (47) ಬಂಧಿತರು. ಆರೋಪಿಗಳ ಬ್ಯಾಂಕ್ ಖಾತೆ, ಸಿಸಿಟಿವಿ ದೃಶ್ಯಾವಳಿ ಹಾಗೂ ಕರೆ ದಾಖಲೆಗಳ ಪರಿಶೀಲನೆ ನಡೆಸಿದಾಗ, ಕೊಲೆಯ ಒಳಸಂಚು ಮತ್ತು ಹಣಕಾಸು ನೆರವಿನಲ್ಲಿ ಇವರಿಬ್ಬರ ಪ್ರಮುಖ ಪಾತ್ರವಿರುವುದು ದೃಢಪಟ್ಟಿದೆ.
ಬಂಧಿತ ಸದಾನಂದನಿಂದ ಕೃತ್ಯಕ್ಕೆ ಬಳಸಿದ 2 ಮೊಬೈಲ್, 1 ಬೈಕ್ ಮತ್ತು ನಗದು ಹಾಗೂ ಕಿಶೋರ್‌ನಿಂದ 3 ಮೊಬೈಲ್ ಮತ್ತು 1 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 7ರಂದು ನಡೆದ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ಶೇಖ್ ಅವರನ್ನು ಮೊದಲಿಗೆ ಬಂಧಿಸಲಾಗಿತ್ತು. ಅವರಿಗೆ ಹಣ ಜಮಾ ಮಾಡಿದ್ದ ಮೊಹಮ್ಮದ್ ಇರ್ಷಾದ್ ಮತ್ತು ಚಿರಾಗ್ ಪೂಜಾರಿಯನ್ನು ಆ ಬಳಿಕ ಅರೆಸ್ಟ್ ಮಾಡಲಾಗಿತ್ತು. ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸ್ ಫೈರಿಂಗ್‌ನಿಂದ ಗಾಯಗೊಂಡಿರುವ ಮುಖ್ಯ ಆರೋಪಿ ರಾಜು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಡಿಸ್ಚಾರ್ಜ್ ಆದ ಬಳಿಕ ಹೆಚ್ಚಿನ ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


