
ಮಾಣಿ; ಆಹಾರ ಪದ್ಧತಿಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಆಗುತ್ತಿವೆ ಎಂದು ಮಾಣಿ ಗ್ರಾಮ ಪಂಚಾಯತ್ತಿನ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಮಾಣಿಕ್ಯ ಸಂಜೀವಿನಿ ಒಕ್ಕೂಟ ಮತ್ತು ಮಾಣಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಕ್ಕಳು ಸೇವಿಸುವ ಆಹಾರದ ಬಗ್ಗೆ ಮತ್ತು ಮಕ್ಕಳು ಸಣ್ಣ ಪ್ರಾಯದಲ್ಲಿ ಅತೀ ಹೆಚ್ಚು ಮೊಬೈಲ್ ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಪೋಷಕರು ತಿಳಿದುಕೊಂಡು ಜಾಗೃತಿ ವಹಿಸುವ ಅಗತ್ಯ ಇದೆ ಎಂದು ಅವರು ಹೇಳಿದರು.
ಮಾಣಿಕ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಅಧ್ಯಕ್ಷತೆ ವಹಿಸಿದ್ದರು. ಮಾಣಿ ಗ್ರಾಮ ಪಂಚಾಯತ್ತಿನ ಅಭಿವೃದ್ಧಿ ಅಧಿಕಾರಿ ಗಿರಿಜಾ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮಾಣಿ ಗ್ರಾಮ ಪಂಚಾಯತ್ತಿನ ಮಾಜಿ ಅಧ್ಯಕ್ಷ ಇಬ್ರಾಹಿಂ.ಕೆ, ನಿಕಟಪೂರ್ವಾಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ ತೋಟ, ಕಾರ್ಯದರ್ಶಿ ಚಂದ್ರಾವತಿ, ಕಂದಾಯ ಇಲಾಖೆಯ ಗ್ರಾಮಾಧಿಕಾರಿ ಸಂತೋಷ್ ಉಲ್ಲಟ್ಟಿ, ತಾಲೂಕು ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ವಿದ್ಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಮಂಗಳೂರು ರೋಶನಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸ್ವಾತಿ ಸ್ವಾಗತಿಸಿ, ಚೈತ್ರ ವಂದಿಸಿ, ಲೈಲಾಬಿ ಕಾರ್ಯಕ್ರಮ ನಿರೂಪಿಸಿದರು.


