ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ‘ಕೋಕರ್ ಹೈಡ್ರೋಟ್ರೀಟರ್ ಘಟಕ’ದಲ್ಲಿ (CHTU) ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಗುತ್ತಿಗೆ ನೌಕರ ಮನೀಶ್ ಕರ್ಕಡ (23) ಅವರ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂಪಾಯಿ ಆರ್ಥಿಕ ಪರಿಹಾರ ನೀಡುವುದಾಗಿ ಎಂಆರ್‌ಪಿಎಲ್ ಆಡಳಿತ ಮಂಡಳಿ ಪ್ರಕಟಿಸಿದೆ.
ಕಾರ್ಮಿಕ ಸಂಘಟನೆಗಳ ತೀವ್ರ ಪ್ರತಿಭಟನೆಯ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಂಆರ್‌ಪಿಎಲ್‌ನಿಂದ ನೇರ ನೆರವು 90 ಲಕ್ಷ ರೂಪಾಯಿ, ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಮೂಲಕ 10 ಲಕ್ಷ ರೂಪಾಯಿ ಹಾಗೂ ವರ್ಕ್‌ಮೆನ್ ಕಾಂಪೆನ್ಸೇಷನ್ ಪಾಲಸಿಯಿಂದ 20 ಲಕ್ಷ ರೂಪಾಯಿ ಸೇರಿ ಒಟ್ಟು 1.20 ಕೋಟಿ ರೂಪಾಯಿ ಪರಿಹಾರ ಸಿಗಲಿದೆ.

ಇದರ ಜೊತೆಗೆ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಗುತ್ತಿಗೆ ಆಧಾರಿತ ಕಾರ್ಮಿಕರಿಗೂ ಸಮಗ್ರ ‘ಮೆಡಿಕ್ಲೇಮ್ ವಿಮೆ’ ಒದಗಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂಬರುವ 4 ವಾರಗಳಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ಸಂಸ್ಥೆ ತಿಳಿಸಿದೆ.


