
ಮಂಗಳೂರು: ಅತ್ತಾವರ ಸಮೀಪದ ಲಾಡ್ಜ್ ಒಂದರಲ್ಲಿ ತಾಂತ್ರಿಕ ದೋಷದಿಂದಾಗಿ ಲಿಫ್ಟ್ ಬಾಗಿಲು ಮುಚ್ಚಿಕೊಂಡು ಸುಮಾರು ಒಂದು ಗಂಟೆ ಕಾಲ ಒಳಗಡೆಯೇ ಸಿಲುಕಿದ್ದ ತೆಲಂಗಾಣ ಮೂಲದ ಮೂವರು ಪ್ರವಾಸಿಗರನ್ನು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಕೃಷ್ಣ ರೆಡ್ಡಿ (60), ರಾಮರಾವ್ ಯಾದವ್ (38) ಹಾಗೂ ಆಲ್ಬರ್ಟ್ (61) ರಕ್ಷಿಸಲ್ಪಟ್ಟ ಪ್ರವಾಸಿಗರು. ಶನಿವಾರ ಬೆಳಿಗ್ಗೆ ಲಾಡ್ಜ್ ಖಾಲಿ ಮಾಡಿ ಕೆಳಗಿಳಿಯುತ್ತಿದ್ದಾಗ ನೆಲಮಹಡಿಯಲ್ಲಿ ಲಿಫ್ಟ್ ಲಾಕ್ ಆಗಿದೆ. 55 ನಿಮಿಷಕ್ಕೂ ಹೆಚ್ಚು ಕಾಲ ಒಳಗಡೆಯೇ ಇದ್ದ ಪ್ರವಾಸಿಗರು ಉಸಿರಾಟದ ತೊಂದರೆಯಿಂದ ಆತಂಕಗೊಂಡು, ಲಿಫ್ಟ್ ಒಳಗಿನಿಂದಲೇ ಗೂಗಲ್ ಮೂಲಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಮಾಹಿತಿ ದೊರೆತ ಕೇವಲ 5 ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ ಎಎಸ್‌ಒ ಜಯ, ಚಾಲಕ ಕಾರ್ತಿಕ್, ಫೈರ್‌ಮ್ಯಾನ್‌ಗಳಾದ ಚಂದ್ರ ಮತ್ತು ಚೇತನ್ ಹೈಡ್ರಾಲಿಕ್ ಸ್ಪ್ರೆಡ್ಡರ್ ಹಾಗೂ ಕಟ್ಟರ್ ಬಳಸಿ ಲಿಫ್ಟ್ ಬಾಗಿಲು ತೆರೆದು ಮೂವರನ್ನೂ ಹೊರತಂದಿದ್ದಾರೆ. ರಕ್ಷಿಸಲ್ಪಟ್ಟವರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಕೆ.ಎನ್. ತಿಳಿಸಿದ್ದಾರೆ.


