Wednesday, September 30, 2026
Homeಅಪರಾಧಬಿಟ್‌ಕಾಯಿನ್ ಹಗರಣ ಆರೋಪದಡಿ ಬಂಧಿಯಾಗಿದ್ದ ಹ್ಯಾಕರ್ ಶ್ರೀಕಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು

ಬಿಟ್‌ಕಾಯಿನ್ ಹಗರಣ ಆರೋಪದಡಿ ಬಂಧಿಯಾಗಿದ್ದ ಹ್ಯಾಕರ್ ಶ್ರೀಕಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು

- Advertisement -
- Advertisement -

ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಹಾಗೂ ವೆಬ್‌ಸೈಟ್‌ಗಳ ಹ್ಯಾಕಿಂಗ್ ಆರೋಪದಡಿ ಜಾರಿ ನಿರ್ದೇಶನಾಲಯ (ED) ಬಂಧಿಸಿದ್ದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಬುಧವಾರ ಇಬ್ಬರ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿ ಜಾಮೀನು ನೀಡಿತು. ಶ್ರೀಕಿ ಪರ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿ, ನ್ಯಾಯಾಲಯ ವಿಧಿಸುವ ಯಾವುದೇ ಷರತ್ತುಗಳಿಗೆ ಬದ್ಧರಾಗಿರುವುದಾಗಿ ತಿಳಿಸಿದರು. ಅಲ್ಲದೆ, ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರಿನ ಸಂಬಂಧ ಸಕ್ಷಮ ನ್ಯಾಯಾಲಯ ಇನ್ನೂ ಸಂಜ್ಞೆ ಪರಿಗಣಿಸಬೇಕಿದೆ ಎಂದು ವಾದಿಸಿದರು.

ರಾಬಿನ್ ಖಂಡೇವಾಲ ಪರ ವಕೀಲ ಬಿಪಿನ್ ಹೆಗಡೆ ವಾದಿಸಿ, ರಾಬಿನ್‌ನಿಂದ ಯಾವುದೇ ವಸ್ತುಗಳನ್ನು ಜಪ್ತಿ ಮಾಡಿಲ್ಲ. ಅಲ್ಲದೆ, ಅವರು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಯಾಗಿ, ಜಾರಿ ನಿರ್ದೇಶನಾಲಯದ ಪರ ವಿಶೇಷ ಸರ್ಕಾರಿ ಅಭಿಯೋಜಕ (SPP) ಮಧುರಾವ್‌ ವಾದಿಸಿ, ಶ್ರೀಕಿ ವಿವಿಧ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಹಣ ಸಂಗ್ರಹಿಸಿ ಅದನ್ನು ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದ್ದಾನೆ. ಹ್ಯಾಕಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ಐಷಾರಾಮಿ ಜೀವನ ನಡೆಸಲು ಬಳಸಲಾಗಿದೆ. ವಿದೇಶಿ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿ ಹಣ ಇರಿಸಿರುವ ಸಾಧ್ಯತೆಯಿದ್ದು, ಅದನ್ನು ಇನ್ನೂ ಜಪ್ತಿ ಮಾಡಲಾಗಿಲ್ಲ. ಆರು ಮಂದಿಯ ವಿರುದ್ಧ ಪಿಎಂಎಲ್‌ಎ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಇಬ್ಬರಿಗೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಆರೋಪಿಗಳು ಕಳೆದ ಐದು ವರ್ಷಗಳಿಂದ ತನಿಖೆಗೆ ಸಹಕರಿಸುತ್ತಿದ್ದರೂ ತನಿಖೆಯ ಅಂತಿಮ ಹಂತದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಗಮನಿಸಿತು. ಹಣ ಎಲ್ಲಿದೆ ಎಂಬುದು ತನಿಖಾ ಸಂಸ್ಥೆಗೆ ತಿಳಿದಿದ್ದರೆ ಆರೋಪಿಗಳನ್ನು ಬಂಧನದಲ್ಲೇ ಮುಂದುವರಿಸಬಹುದಾಗಿತ್ತು. ಆದರೆ ಹಣದ ನಿಖರ ಸ್ಥಳದ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ಇಲ್ಲ ಎಂಬ ಅಂಶವನ್ನೂ ನ್ಯಾಯಪೀಠ ಪರಿಗಣಿಸಿ, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.

- Advertisement -

Latest News

error: Content is protected !!