Tuesday, September 29, 2026
Homeಕರಾವಳಿಉಡುಪಿಕಾರ್ಕಳ: ಹೊಸ ಮನೆ ಹಂಚಿಕೆ ವಿಚಾರದಲ್ಲಿ ಜಗಳ; ಮಗನಿಗೆ ಕತ್ತಿಯಿಂದ ಕಡಿದ ತಂದೆ

ಕಾರ್ಕಳ: ಹೊಸ ಮನೆ ಹಂಚಿಕೆ ವಿಚಾರದಲ್ಲಿ ಜಗಳ; ಮಗನಿಗೆ ಕತ್ತಿಯಿಂದ ಕಡಿದ ತಂದೆ

- Advertisement -
- Advertisement -

ಕಾರ್ಕಳ: ಹೊಸ ಮನೆ ಹಂಚಿಕೆ ವಿಚಾರವಾಗಿ ಉಂಟಾದ ಕೌಟುಂಬಿಕ ಜಗಳ ವಿಕೋಪಕ್ಕೆ ತಿರುಗಿ, ತಂದೆಯೇ ಮಗನ ಮೇಲೆ ಕತ್ತಿಯಿಂದ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ತೆಳ್ಳಾರ್ ದುರ್ಗಾ ಗ್ರಾಮದ ಪುಲ್ಲಾಟ್‌ನಲ್ಲಿ ಸೋಮವಾರ (ಸೆ.28) ರಾತ್ರಿ ನಡೆದಿದೆ. ಘಟನೆಯಲ್ಲಿ ಮಗ ಚಾಲ್ಸ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ: ಮೂಲತಃ ಕೇರಳದವರಾದ ತ್ರೆಸಿಯಾಮ್ (65) ಅವರು ಪತಿ ಮಥಾಯ್, ಮಗ ಚಾಲ್ಸ್ ಹಾಗೂ ಮೊಮ್ಮಗಳು ಸಾನ್ವಿಯೊಂದಿಗೆ ಕಳೆದ 17 ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಪ್ರಸ್ತುತ ಹಳೆಯ ಮನೆಯ ಪಕ್ಕದಲ್ಲೇ ಹೊಸ ಮನೆಯೊಂದನ್ನು ನಿರ್ಮಿಸಲಾಗುತ್ತಿತ್ತು. ಸೆ.28ರ ರಾತ್ರಿ 10 ಗಂಟೆಯ ಸುಮಾರಿಗೆ ಚಾಲ್ಸ್, ನಿರ್ಮಾಣವಾಗುತ್ತಿರುವ ಹೊಸ ಮನೆಯನ್ನು ತನಗೆ ಬಿಟ್ಟುಕೊಡುವಂತೆ ತಾಯಿ ಜೊತೆ ಜಗಳ ತೆಗೆದಿದ್ದ ಎನ್ನಲಾಗಿದೆ.

ಈ ವೇಳೆ ಜಗಳ ಬಿಡಿಸಲು ಬಂದ ತಂದೆ ಮಥಾಯ್ ಅವರನ್ನು ಚಾಲ್ಸ್ ತಳ್ಳಿದ್ದರಿಂದ ಅವರು ಕೆಳಗೆ ಬಿದ್ದಿದ್ದರು. ಬಳಿಕ ಶೆಡ್ ಬಳಿ ಕುಳಿತಿದ್ದ ಮಥಾಯ್ ಅವರ ಮೇಲೆ ಚಾಲ್ಸ್ ಮತ್ತೆ ಹಲ್ಲೆಗೆ ಮುಂದಾದಾಗ, ಕೋಪಗೊಂಡ ಮಥಾಯ್ ತೋಟದ ಕೆಲಸಕ್ಕೆ ಬಳಸುವ ಕತ್ತಿಯಿಂದ ಮಗನಿಗೆ ಕಡಿದಿದ್ದಾರೆ ಎನ್ನಲಾಗಿದೆ. ದಾಳಿಯಿಂದ ಚಾಲ್ಸ್ ಅವರ ಕುತ್ತಿಗೆ ಮತ್ತು ಎದೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಸಂಬಂಧಿ ವಿಬಿನ್ ತಕ್ಷಣ ಆಂಬುಲೆನ್ಸ್ ಮೂಲಕ ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಿದ್ದಾರೆ.ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!